ಕೆರಗೋಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ:ಬಿಗಿ ಭದ್ರತೆ

ಮಂಡ್ಯದ ಕೆರಗೋಡಲ್ಲಿ ಹನುಮಧ್ವಜ ಇಳಿಕೆ ಖಂಡಿಸಿ ಹಿಂದೂಪರ ಸಂಘಟನೆಗಳು ಬೈಕ್ ರ್‍ಯಾಲಿ ನಡೆಸಿದರು.

ಮಂಡ್ಯ,ಫೆ.೯-ಜಿಲ್ಲೆಯ ಕೆರಗೋಡಿನಲ್ಲಿ ಹನುಮಧ್ವಜ ತೆರವು ಸಂಬಂಧ ವಿವಾದ ಉಂಟಾಗಿ ಹಿಂದೂಪರ ಸಂಘಟನೆಗಳು ಇಂದು ಕರೆ ನೀಡಿದ್ದ ಮಂಡ್ಯ ಮತ್ತು ಕೆರಗೋಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಎದುರಾಗಿದೆ.ಬಂದ್‌ಗೆ ವರ್ತಕರು, ಹೋಟೆಲ್‌ಮಾಲೀಕರು ಬೆಂಬಲ ವ್ಯಕ್ತಪಡಿಸಿದ ಕಾರಣ ಅಂಗಡಿಗಳು ಬಂದ್ ಆಗಿದೆ. ಧ್ವಜ ಸ್ತಂಭದ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.ರವಿಕುಮಾರ್ ಫ್ಲೆಕ್ಸ್ ಹರಿದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಈ ಹಿನ್ನೆಲೆಯಲ್ಲಿ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ರವಿಕುಮಾರ್ ನಿವಾಸಕ್ಕೆ ೧೦ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.ಬಂದ್ ಹಿನ್ನೆಲೆಯಲ್ಲಿ ಮಂಡ್ಯ ಕೆರಗೋಡು ಸೇರಿ ಜಿಲ್ಲಾದ್ಯಂತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು ಇಲ್ಲಿಯವರೆಗೆ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಮಂಡ್ಯ ನಗರ, ಕೆರಗೋಡು ಗ್ರಾಮವನ್ನು ಬಂದ್ ಮಾಡುವ ನಿಟ್ಟಿನಲ್ಲಿ ಭಜರಂಗದಳ, ವಿಹೆಚ್ ಪಿ, ಶ್ರೀರಾಮ ಭಜನಾ ಮಂಡಳಿಯಿಂದ ಇಂದು ಬಂದ್ ಗೆ ಕರೆ ನೀಡಲಾಗಿದೆ. ಕೆರಗೋಡು ಗ್ರಾಮದಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆದಿದೆ. ಅನೇಕ ಕಡೆ ಅಂಗಡಿ-ಮುಂಗಟ್ಟುಗಳು ಮುಂಜಾಗ್ರತಾ ಕ್ರಮವಾಗಿ ಸ್ವಯಂಪ್ರೇರಿತವಾಗಿ ಮುಚ್ಚಿವೆ.ಬಂದ್‌ಗೆ ಜೆಡಿಎಸ್, ಬಿಜೆಪಿ ನೇರ ಬೆಂಬಲ ನೀಡುತ್ತಿಲ್ಲ, ಬಿಜೆಪಿ ಬಾಹ್ಯ ಬೆಂಬಲ ಮಾತ್ರ ನೀಡುತ್ತಿದ್ದರೆ, ಜೆಡಿಎಸ್ ಅಂತರ ಕಾಯ್ದುಕೊಂಡಿದೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಂದ್‌ಗೆ ಬಿಜೆಪಿ, ಜೆಡಿಎಸ್ ಬೆಂಬಲ ನೀಡುತ್ತಿಲ್ಲ ಎಂದು ಬಿಜೆಪಿ ಮುಖಂಡ ಜಯರಾಂ ತಿಳಿಸಿದ್ದಾರೆ.ಕೆರಗೋಡು ಗ್ರಾಮದ ರಂಗಮಂದಿರ ಮುಂದೆ ಸ್ಥಾಪಿಸಿರುವ ೧೦೮ ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಬೇಕು ಎಂದು ಒತ್ತಾಯಿಸಿ ವಿಹೆಚ್ ಪಿ, ಭಜರಂಗದಳ, ಭಜರಂಗ ಸೇನೆ, ಶ್ರೀರಾಮ ಸೇನೆ ಕಾರ್ಯಕರ್ತರು ಬಂದ್ ಗೆ ಕರೆ ನೀಡಿದ್ದಾರೆ.
ಬೈಕ್ ರ್‍ಯಾಲಿ:
ಕೆರಗೋಡು ಗ್ರಾಮದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೈಕ್ ರ್‍ಯಾಲಿ ಮೂಲಕ ಕಾರ್ಯಕರ್ತರು ನಗರಕ್ಕೆ ಆಗಮಿಸಿದ್ದಾರೆ. ನಗರದ ವೀರಾಂಜನೇಯ ದೇವಾಲಯದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಾಗಿದೆ.
ಪ್ರತಿಭಟನೆಕಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದಾದ ರೈಲ್ವೇ ನಿಲ್ದಾಣದ ಬಳಿಯಿರುವ ಆಂಜನೇಯ ಸ್ವಾಮಿ ದೇವಸ್ಥಾನ, ಮಹಾವೀರ ವೃತ್ತ, ಸಂಜಯ ಸರ್ಕಲ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮೊದಲಾದ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಅಭೂತಪೂರ್ವ ಭದ್ರತೆ:
ವಿವಿ ರೋಡ್, ಆರ್ ಪಿ ರೋಡ್, ಹೊಸಪೇಟೆ ಬೀದಿ ಮತ್ತು ಇನ್ನೂ ಕೆಲ ಕಡೆಗಳಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ವಿವಾದದ ಸ್ಥಳವಾಗಿರುವ ಕೆರಗೋಡುವಿನಲ್ಲೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಇಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಲಾಗಿದೆ.