ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮ ಮಂಜುನಾಥ ಪ್ರಸಾದ್

ಬೆಂಗಳೂರು, ನ.11- ಹೊಸ ಗುಡ್ಡದಹಳ್ಳಿಯಲ್ಲಿ ರೇಖಾ ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ನಗರದಲ್ಲಿಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾಗಿರುವ ಮನೆ ಆಸ್ತಿಪಾಸ್ತಿ ಸೇರಿದಂತೆ ಬೆಸ್ಕಾಂಗೆ ಆಗಿರುವ ನಷ್ಟ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಬೆಂಗಳೂರು ಹೊರವಲಯದ ಆನೇಕಲ್, ಕುಂಬಳಗೋಡು ಬಳಿ ಫ್ಯಾಕ್ಟರಿ ನಡೆಸಲು ಪರವಾನಗಿ ನೀಡಲಾಗಿದೆ. ಆದರೆ ಇಲ್ಲಿ ಅಕ್ರಮವಾಗಿ ಕೆಮಿಕಲ್ ಸಂಗ್ರಹಿಸಿದ್ದಾರೆ.

ಈ ರೀತಿಯಲ್ಲಿ ಸಂಗ್ರಹಕ್ಕೆ ಬಿಬಿಎಂಪಿ ಕಡೆಯಿಂದಲೂ ಸಹ ಯಾವ ರೀತಿಯ ಅನುಮತಿ ನೀಡಿಲ್ಲ. ಸದ್ಯ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುತ್ತೇವೆ. ಜತೆಗೆ ಜಂಟಿ ಸಮೀಕ್ಷೆ ಮಾಡಲು ಹೇಳಿದ್ದೇವೆ. ಮಾತ್ರವಲ್ಲದೆ, ಬೆಸ್ಕಾಂ ಕಡೆಯಿಂದಲೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಳೆದ 20 ವರ್ಷದಿಂದ ಅಕ್ರಮ ನಡೆದರೂ ಸಹ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇಲ್ಲಿ ಬಿಬಿಎಂಪಿ ಅಧಿಕಾರಿಗಳ ವೈಫಲ್ಯವು ಇದೆ ಎಂದ ಅವರು, ಜನ ವಸತಿ ಪ್ರದೇಶದಲ್ಲಿ ಕಂಪನಿಗಳಿಗೆ ಬಾಡಿಗೆ ಕೊಡುವವರ ವಿರುದ್ಧವೂ ‌ಕ್ರಮ ಕೈಗೊಳ್ಳಬೇಕಾಗಿದೆ ಎಂದರು.