ಕೆಮಿಕಲ್ ಗೋಡೌನ್‌ಗೆ ಬೆಂಕಿ ಮಾಲೀಕನ ವಿರುದ್ಧ ಮತ್ತೊಂದು ಕೇಸ್

ಬೆಂಗಳೂರು,ನ.೧೨-ಹೊಸಗುಡ್ಡದ ಹಳ್ಳಿಯ ರೇಖಾ ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಸಂಭವಿಸಿದ ಅವಘಡ ಸಂಬಂಧ ಬಂಧಿತ ಕಂಪನಿ ಮಾಲೀಕನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಶಂಭುಲಿಂಗ ಎಂಬುವರು ನೀಡಿದ ದೂರು ಆಧರಿಸಿ ಮತ್ತೊಂದು ಎಫ್‌ಐಆರ್ ದಾಖಲಾಗಿದ್ದು, ಬ್ಯಾಟರಾಯನಪುರ ಪೊಲೀಸರು ಐಪಿಸಿ ಸೆಕ್ಷನ್ ೪೨೭, ೩೩೮, ೨೮೫ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಶಂಭುಲಿಂಗ ಎಂಬುವರು ಕೆಲಸದ ನಿಮಿತ್ತ ಹೊಸಗುಡ್ಡದ ಹಳ್ಳಿ ಬಳಿ ತೆರಳಿ ಟೀ ಕುಡಿದು ಬರುವಷ್ಟರಲ್ಲಿ ಅವರ ಲಗೇಜ್ ಟೆಂಪೋಗೆ ಬೆಂಕಿ ಹತ್ತಿದೆ. ಹೀಗಾಗಿ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಇದಲ್ಲದೆ ಗೋದಾಮು ಬಳಿ ನಿಲ್ಲಿಸಿದ್ದ ೫ ಕಾರ್ ಹಾಗೂ ೨ ಬೈಕ್‌ಗಳು ಸಹ ಬೆಂಕಿಗಾಹುತಿಯಾಗಿದೆ.
ಘಟನೆಯಲ್ಲಿ ಬರೋಬ್ಬರಿ ೪೦ ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳು ಭಸ್ಮವಾಗಿರುವ ವಿಚಾರ ಬಯಲಿಗೆ ಬಂದಿದೆ. ಮತ್ತಷ್ಟು ದೂರುಗಳು ಈ ಕಂಪನಿ ವಿರುದ್ಧ ದಾಖಲಾಗುವ ಸಾಧ್ಯತೆ ಇದೆ. ಸದ್ಯ ಶಂಕರಪುರಂನ ಶಂಕರ ಪಾರ್ಕ್ ನಿವಾಸ ಬಳಿ ಕಂಪನಿ ಮಾಲೀಕ ಸಜ್ಜನ್ ರಾಜ್, ಪತ್ನಿ ಕಮಲ ಹಾಗೂ ಪುತ್ರ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ತನಿಖೆ ವೇಳೆ ಬಿಬಿಎಂಪಿ,ಆಗ್ನಿಶಾಮಕ ತುರ್ತು ಸೇವೆಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೆ ಗೋದಾಮು ಕಾರ್ಯ ನಿರ್ವಹಣೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ