ಕೆಬಿಜೆಎನ್‌ಎಲ್ ಎಂಡಿಗೆ ರೈತರಿಂದ ಮುತ್ತಿಗೆ – ಸ್ಥಳ ಪರಿಶೀಲನೆ

ನಾರಾಯಣಪೂರ ಬಲದಂಡೆ ಕಾಲುವೆ : ಕಳಪೆ ಕಾಮಗಾರಿ
ರಾಯಚೂರು.ನ.೧೮- ನಾರಾಯಣಪೂರ ಬಲದಂಡೆ ಕಾಲುವೆ ಕಾಮಗಾರಿ ಕಳಪೆ ಮತ್ತು ಜಮೀನು ಪರಿಹಾರ ಆಗ್ರಹಿಸಿ ಇಂದು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ ಅವರಿಗೆ ಘೇರಾವ್ ಹಾಕಿದ ರೈತರು ಅವರ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮನ್ಸಲಾಪೂರು, ಮರ್ಚೇಡ್ ಹಾಗೂ ಸಗಮಕುಂಟಾ ಗ್ರಾಮಗಳ ರೈತರು ಕಾಲುವೆ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಳಪೆ ಕಾಮಗಾರಿ ಮೂಲಕ ಸರ್ಕಾರದ ಹಣ ಕೊಳ್ಳೆ ಹೊಡೆಯಲಾಗುತ್ತಿದೆಂದು ದೂರಿದರು. ವ್ಯವಸ್ಥಾಪಕ ನಿರ್ದೇಶಕರು ವಾಹನದಲ್ಲಿ ಕುಳಿತು ಹೋಗುವುದಕ್ಕೆ ಅವಕಾಶ ನೀಡದೇ, ಅಡ್ಡಗಟ್ಟಿ ಕೂಡಲೇ ಕಾಲುವೆಯ ಕಳಪೆ ಕಾಮಗಾರಿ ಬಗ್ಗೆ ಅವರ ಗಮನಕ್ಕೆ ತರಲಾಯಿತು. ಕಾಲುವೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡದಿರಲು ಕಾರಣವೇನೆಂದು ಅಧಿಕಾರಿಯನ್ನು ಆಕ್ರೋಶದಿಂದ ಪ್ರಶ್ನಿಸಿದರು.
ಕಾಲುವೆ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಿಂದ ನಿರ್ವಹಿಸಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ, ಯಾರು ಪರಿಶೀಲಿಸುತ್ತಿಲ್ಲ. ನೀವು ಈಗ ಸ್ಥಳಕ್ಕೆ ಬಂದು ಕಾಮಗಾರಿ ವೀಕ್ಷಿಸುವಂತೆ ಪಟ್ಟು ಹಿಡಿದರು. ವ್ಯವಸ್ಥಾಪಕ ನಿರ್ದೇಶಕರು, ರೈತರನ್ನು ಸಮಾಧಾನ ಪಡಿಸಲು ಏನೆಲ್ಲ ಪ್ರಯತ್ನ ನಡೆಸಿದರೂ, ರೈತರು ಒಪ್ಪಲಿಲ್ಲ. ಕೆಬಿಜೆಎನ್‌ಎಲ್ ಎಲ್ಲಾ ಅಧಿಕಾರಿಗಳಿಗೆ ಪರಿಸ್ಥಿತಿ ತಿಳಿಸಿ, ಬೇಜಾರಾಗಿದೆ. ಈಗ ವ್ಯವಸ್ಥಾಪಕ ನಿರ್ದೇಶಕರು ಕಾಮಗಾರಿ ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದು, ವಾಹಕ್ಕೆ ಮುತ್ತಿಗೆ ಹಾಕಿದ್ದರು. ಸ್ಥಳ ಭೇಟಿಗೆ ಬಾರದಿದ್ದರೇ, ಅವರ ವಾಹನದ ಮುಂದೆ ಕುಳಿತುಕೊಳ್ಳಲಾಗುತ್ತದೆ. ಅವರನ್ನು ಮುಂದೆ ಹೋಗಲು ಬಿಡುವುದಿಲ್ಲವೆಂದು ಎಚ್ಚರಿಸಿದರು.
ನೀವು ಸ್ಥಳಕ್ಕೆ ಬಾರದಿದ್ದರೇ, ನಿಮ್ಮ ಹೆಸರಿನಲ್ಲಿ ಕ್ರಿಮಿನಾಶಕ ಸೇವಿಸಿ ಸಾಯುತ್ತೇವೆಂದು ಎಚ್ಚರಿಕೆಯೂ ನೀಡಲಾಯಿತು. ಕಛೇರಿಯಲ್ಲಿದ್ದರೆ ಕರೆ ಸ್ವೀಕರಿಸುವುದಿಲ್ಲ, ಇಲ್ಲಿ ಬಂದಾಗ ಸ್ಥಳಕ್ಕೆ ಭೇಟಿ ನೀಡುವುದಿಲ್ಲ. ಜಮೀನು ಪರಿಹಾರಕ್ಕೆ ಸಂಬಂಧಿಸಿ ದಾಖಲೆ ಸಲ್ಲಿಸಿ, ಒಂದು ವರ್ಷ ಕಳೆದರೂ, ಇನ್ನೂವರೆಗೂ ಪರಿಹಾರ ನೀಡಿಲ್ಲ. ಸ್ಥಳದಿಂದಲೇ ಭೂ ಪರಿಹಾರ ವಿಭಾಗದ ಅಧಿಕಾರಿಗೆ ಮಾತನಾಡಿ, ಸೂಚನೆ ನೀಡಿದ ಅವರು, ನಂತರ ರೈತರ ಒತ್ತಡಕ್ಕೆ ಮಣಿದು, ಕಾಲುವೆ ಪರಿಶೀಲನೆಗೆ ಮುಂದಾದರು. ಕೆಬಿಜೆಎನ್‌ಎಲ್ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವುದಕ್ಕೆ ಸಂಬಂಧಿಸಿ ಅಲ್ಲಿಯ ರೈತರು ಅಧಿಕಾರಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಆಂಜಿನೇಯ್ಯ ಕೋಂಬಿನ್, ವೆಂಕಟೇಶ ನಾಯಕ, ಮಲ್ಲೇಶ ಸಗಮಕುಂಟಾ, ಲಕ್ಷ್ಮಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.