ಕೆಬಿಎಸ್ ಬ್ಯಾಂಕ್ ಸೇವೆ: ಗ್ರಾಹಕರ ಮನೆ ಬಾಗಿಲಿಗೆ

ಕಲಬುರಗಿ,ನ.29: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿ ಹಣ ಡ್ರಾ ಮತ್ತು ಪಾವತಿ ಮಾಡುವ ಸೇವೆಯನ್ನು ಗ್ರಾಮೀಣ ಪ್ರದೇಶದ ಗ್ರಾಹಕರ ಮನೆ ಬಾಗಿಲಿಗೆ ಕೃಷ್ಣಾ ಭೀಮಾ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ ಪ್ರಾರಂಭಿಸಿದೆ ಎಂದು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೆಶಕ ದುರ್ಗಾಪ್ರಸಾದ ದೊನೆಪುಡಿ ಅವರು ಹೇಳಿದರು.ಕಲಬುರಗಿ ನಗರದಲ್ಲಿ ಈ ಸೇವೆ ಒದಗಿಸುವ ಕ್ಯೂಆರ್ ಕೋಡ್‍ಅನ್ನು ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶದ 13 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಸುಮಾರು 1700 ಕ್ಕೂ ಅಧಿಕ ಹಳ್ಳಿಗಳಲ್ಲಿ ಬ್ಯಾಂಕಿನ ಗ್ರಾಹಕರ ನೆಲೆಯು ಹೆಚ್ಚಾಗಿ ಕುಶಲಕರ್ಮಿಗಳು,ಬಡವರು,ಸಣ್ಣ ಮತ್ತು ಅತಿ ಸಣ್ಣ ರೈತರು,ರಸ್ತೆಬದಿ ವ್ಯಾಪಾರಿಗಳು ಇತ್ಯಾದಿಗಳನ್ನು ಒಳಗೊಂಡಿದೆ.ಹಳ್ಳಿಗಳಲ್ಲಿರುವ ಗ್ರಾಹಕರನ್ನು ಇನ್ನಷ್ಟು ಗ್ರಾಹಕಸ್ನೇಹಿಯಾಗಿ ತಲುಪುವ ಮೂಲಕ ತನ್ನ ಕಾರ್ಯಾಚರಣೆ ಪ್ರದೇಶದಲ್ಲಿ ಆರ್ತಿಕ ಒಳಗೊಳ್ಳುವಿಕೆಯನ್ನು ಸಾಧಿಸಲು ಶ್ರಮಿಸುತ್ತಿದೆ.ಈ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಹೊಸ ಸೇವೆ ಆರಂಭಿಸಿದ್ದೇವೆ.2024 ರ ಮಾರ್ಚ 31 ರ ಅಂತ್ಯಕ್ಕೆ 1000 ಕೋಟಿ ರೂಗಳ ಒಟ್ಟು ವ್ಯವಹಾರ ಮುಟ್ಟುವ ಆಕಾಂಕ್ಷೆ ಹೊಂದಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕರಾದ ಸೈಯದ್ ಮಹಮ್ಮದ್ ಫಾರೂಕಿ,ವಿ.ಜಗನ್ಮೋಹನ,ಬೊಯಪಾಟಿ ವಿಜಯಲಕ್ಷ್ಮೀ,ಡಿ.ಇಂದುಶೇಖರ,ಸಿಜಿಎಂ ಟಿಆರ್ ವಿ ಸತ್ಯನಾರಾಯಣ,ಕಲಬುರಗಿ ಶಾಖೆ ವ್ಯವಸ್ಥಾಪಕ ನರೇಶ ಛತ್ರಸಾಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.