ಕೆಬಿಎನ್ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೇವೆ

ಕಲಬುರಗಿ,ಮೇ.17: ಇಲ್ಲಿನ ಖಾಜಾ ಬಂದಾನವಾಜ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೆಬಿಎನ್ ಆಸ್ಪತ್ರೆಯಲ್ಲಿ ಮೇ 1ರಿಂದ ಉಚಿತ ಹೆರಿಗೆ ಸೇವೆ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ಡೀನ್ ಡಾ.ಸಿದ್ದೇಶ ಸಿರವಾರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಸ್ಪತ್ರೆಯ 25ನೇ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಸೇವೆ ಆರಂಭಿಸಲಾಗಿದೆ ಎಂದರು.
ಈ ಯೋಜನೆ ಅಡಿ ಸೇವೆ ಬಯಸಿ ಆಸ್ಪತ್ರೆಗೆ ಬರುವ ಎಲ್ಲ ಗರ್ಭಿಣಿಯರಿಗೆ ಉಚಿತವಾಗಿ ರಕ್ತ ತಪಾಸಣೆ, ಸ್ಕ್ಯಾನಿಂಗ್, ಸಹಜ ಹೆರಿಗೆ ಮತ್ತು ಸಿಜೆರಿಯನ್ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಪ್ರಸವಪೂರ್ವ ಹಾಗೂ ಪ್ರಸವೋತ್ತರ ಸಂದರ್ಭದಲ್ಲಿ ಒಂದುವೇಳೆ ಐಸಿಯು ಹಾಗೂ ಎನ್.ಐ.ಸಿ.ಯು ಅಗತ್ಯವೆನಿಸಿದರೆ ಅವುಗಳ ಸೇವೆಯನ್ನು ಸಹ ಉಚಿತವಾಗಿ ಒದಗಿಸಲಾಗುವುದು ಎಂದು ಹೇಳಿದರು.
ಬಡವರಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ನಿತ್ಯ ಗರ್ಭಿಣಿಯರ ಆರೋಗ್ಯ ತಪಾಸಣೆ, ಸಮಾಲೋಚನೆ ಹಾಗೂ ಆ ನಿಟ್ಟಿನಲ್ಲಿ ಅಗತ್ಯವಿರುವ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದು ನುಡಿದರು.
ಹೆರಿಗೆಗೂ ಮುಂಚೆ ಹಾಗೂ ಹೆರಿಗೆಯ ಬಳಿಕ ತಾಯಿ ಮತ್ತು ಮಗುವಿನ ಆರೈಕೆಯ ಜವಾಬ್ದಾರಿಯನ್ನು ಆಸ್ಪತ್ರೆ ತೆಗೆದುಕೊಳ್ಳಲಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರು ಇದರ ಲಾಭ ಪಡೆಯಬೇಕೆಂದು ಮನವಿ ಮಾಡಿದರು.
ಡಾ.ಸಿದ್ದಲಿಂಗ ಚೆಂಗಟಿ, ಡಾ.ರಾಧಿಕಾ ಹಾಗೂ ಡಾ.ಸುಜಾತ ದಡೇದ ಇದ್ದರು.


ಅತ್ಯಾಧುನಿಕ ಆಸ್ಪತ್ರೆ ಸಜ್ಜು
ಜನಸಾಮಾನ್ಯರಿಗೆ ಎಲ್ಲ ರೀತಿಯ ಆರೋಗ್ಯ ಸೇವೆಗಳು ಲಭಿಸುವಂತಾಗಲಿ ಎಂಬ ದೃಷ್ಟಿಯಿಂದ ಕೆಬಿಎನ್ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗುತ್ತಿದೆ, ಈಗಾಗಲೇ ಸಿ.ಟಿ ಸ್ಕ್ಯಾನ್ ವ್ಯವಸ್ಥೆಯಿದ್ದು, 11 ಮಾಡ್ಯುಲಾರ್ ಆಪರೇಷನ್ ಥಿಯೇಟರ್ ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇದರ ಜೊತೆಗೆ, ಆಂಜಿಯೋಗ್ರಾಮ್, ಕೊರೊನರಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ಡಾ.ಸಿದ್ದೇಶ್ ಹೇಳಿದರು.