ಕೆಫೆ ರಾಯಚೂರಿನಲ್ಲೂ ಕಟ್ಟೆಚ್ಚರ

ರಾಯಚೂರು,ಮಾ.೧೦- ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ)ಯ ಅಧಿಕಾರಿಗಳು ಕಲಬುರಗಿಯಲ್ಲಿ ಬೀಡುಬಿಟ್ಟು ತನಿಖೆಯನ್ನು ತೀವ್ರಗೊಳಿಸಿರುವ ಬೆನ್ನಲ್ಲೇ ರಾಯಚೂರಿನಲ್ಲೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದಾರೆ.
ಪೊಲೀಸ್ ಇಲಾಖೆ ೫೦ ವರ್ಷ ಪೂರೈಸುತ್ತಿರುವ ಹಿನ್ನೆಲೆ ಆಯೋಜಿಸಿದ್ದ ವಾಕಾಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಅಕ್ಕಪಕ್ಕದ ಜಿಲ್ಲೆಯಲ್ಲಿ ಶಂಕಿತ ಬಾಂಬರ್ ಓಡಾಟದ ಸುಳಿವು ಹಿನ್ನೆಲೆ ಜನರಲ್ಲಿ ಭದ್ರತೆ ಭಾವನೆ ಮೂಡಿಸಲು ಜಾಗ್ರತೆ ಜಾಥ ನಡೆಸಲಾಯಿತು.
ನಗರದ ಪೊಲೀಸ್ ಪರೇಡ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಡೆದ ವಾಕಾಥಾನ್‌ನಲ್ಲಿ ಸುಮಾರು ೨೫೦ ಪೊಲೀಸ್ ಸಿಬ್ಬಂದಿ ಹಾಗೂ ಎನ್‌ಜಿಓ ಸದಸ್ಯರು ಭಾಗವಹಿಸಿದ್ದರು. ೫೦ ವರ್ಷದ ಸಂಭ್ರಮಾಚರಣೆ ಜೊತೆಗೆ ಜಿಲ್ಲಾ ಪೊಲೀಸ್ ಅಲರ್ಟ್ ಆಗಿದೆ.
ಜನರಿಗೆ ನಿರ್ಭೀತಿಯಿಂದ ಇರಲು ಜಾಗೃತಿ ಮೂಡಿಸುತ್ತಿದ್ದೇವೆ. ಪೂರ್ವ ನಿಯೋಜಿತ ಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ. ಮೇಲಾಧಿಕಾರಿಗಳಿಂದ ಯಾವುದೇ ವಿಶೇಷ ಸಂದೇಶವಿಲ್ಲದಿದ್ದರೂ ಕಟ್ಟೆಚ್ಚರವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೇಳಿದ್ದಾರೆ.