ಕೆಫೆ ಬಾಂಬರ್ ಮತ್ತಷ್ಟು ಸುಳಿವು ಪತ್ತೆ

ಬೆಂಗಳೂರು, ಮಾ.೧೪-ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಬಾಂಬರ್ ನನ್ನು ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ಅಧಿಕಾರಿಗಳಿಗೆ ಮತ್ತಷ್ಟು ಸುಳಿವುಗಳು ದೊರೆತಿವೆ. ಬಾಂಬರ್‌ನೊಂದಿಗೆ ಸಂಪರ್ಕದಲ್ಲಿದ್ದಾ ಎಂಬ ಅನುಮಾನದ ಮೇರೆಗೆ ನಿನ್ನೆ ಬಳ್ಳಾರಿಯ ಶಬ್ಬೀರ್ ಎಂಬ ಓರ್ವನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ನಗರಕ್ಕೆ ಕರೆತಂದು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ. ಬಂಧಿತರೊಂದಿಗೆ ಸಂಪರ್ಕವಿದ್ದ ಶಬ್ಬೀರ್ ವಿಚಾರಣೆ ಅಂತ್ಯವಾಗಿದ್ದು ಬಿಟ್ಟು ಕಳುಹಿಸಲಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಳ್ಳಾರಿಯ ಟ್ಯಾಂಕ್ ಬಂಡ್ ರಸ್ತೆಯ ಶಬ್ಬೀರ್, ಬಾಂಬರ್‌ನೊಂದಿಗೆ ಸಂಪರ್ಕದಲ್ಲಿದ್ದ ಎಂಬ ಅನುಮಾನದ ಮೇರೆಗೆ ಎನ್‌ಐಎ ಅಧಿಕಾರಿಗಳು ನಿನ್ನೆ ಬೆಳಗಿನ ಜಾವ ೪ ಗಂಟೆ ಸುಮಾರಿಗೆ ಬಳ್ಳಾರಿಗೆ ಆಗಮಿಸಿ ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಮಾರ್ಚ್? ೧ರಂದು ರಾತ್ರಿ ೯ ಗಂಟೆ ಒಂದು ನಿಮಿಷಕ್ಕೆ ಬಳ್ಳಾರಿ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದ ಶಂಕಿತ ಬಾಂಬರ್, ಬಸ್ ನಿಲ್ದಾಣದಿಂದ ಆಟೋ ಹತ್ತಿ ಅಲ್ಲಿಂದ ೫೦೦ ಮೀಟರ್ ದೂರ ಇರುವ ಬುಡಾ ಕಾಂಪ್ಲೆಕ್ಸ್ ಬಳಿ ಬಂದು ಅಲ್ಲಿ ಶಬ್ಬೀರನನ್ನು ಭೇಟಿ ಮಾಡಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿಸಿ ಕ್ಯಾಮರಾ ಫೋಟೋಸ್ ಆಧಾರದ ಮೇಲೆ ಶಬ್ಬೀರನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ತೆರಳಿ ನಡೆಸಿದ ವಿಚಾರಣೆ ಅಂತ್ಯಗೊಂಡಿದೆ.
ಇನ್ನು ಶಂಕಿತ ಬಾಂಬರ್ ನೊಂದಿಗೆ ಶಬ್ಬೀರ್ ಬುಡಾ ಕಾಂಪ್ಲೆಕ್ಸ್ ನಿಂದ ೨೦೦ ಮೀಟರ್ ದೂರದಲ್ಲಿರುವ ಮೋತಿ ವೃತ್ತದ ವರಗೆ ಆತನೊಂದಿಗೆ ಮಾತನಾಡುತ್ತಾ ಕಾಲ್ನಡಿಗೆಯಲ್ಲಿ ಬಂದಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಎನ್‌ಐಎ ಅಧಿಕಾರಿಗಳು ಬಳ್ಳಾರಿ ನಗರದ ಟ್ಯಾಂಕ್ ಬಂಡೂ ರಸ್ತೆಯ ಅಕ್ಕಪಕ್ಕದಲ್ಲಿ ಬಿಡು ಬಿಟ್ಟು ಆತನ ಚಲನವಲನ ಗಮನಿಸಿ ವಶಕ್ಕೆ ಪಡೆದಿದ್ದರು. ಶಬ್ಬೀರನು ತೋರಣಗಲ್ ಬಳಿಯ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಬಾಂಬರ್ ನನ್ನ ಭೇಟಿ ಮಾಡಿದ್ದ ಶಬ್ಬೀರ ಮೋತಿ ವೃತ್ತದಿಂದ ಮರಳಿ ಬಸ್ ನಿಲ್ದಾಣಕ್ಕೆ ಆತನೊಂದಿಗೆ ಬಂದು ಕಲ್ಬುರ್ಗಿ ಬಸ್ ಹತ್ತಿಸಿದ್ದ ಎಂಬ ಅನುಮಾನ ಮೂಡಿದೆ. ಜೊತೆಗೆ ಬುಡಾ ಕಾಂಪ್ಲೆಕ್ಸ್ ಬಳಿ ಬಾಂಬರ್‌ಗೆ ಬಟ್ಟೆ ಬದಲಾಯಿಸಲು ಈತನೇ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ನಿನ್ನೆ ನಡೆದ ವಿಚಾರಣೆಯಲ್ಲಿ ಶಬ್ಬೀರ್ ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.