ಕೆಪಿಸಿಸಿ ಸರ್ಜರಿಗೆ ತಯಾರಿ

ಬೆಂಗಳೂರು, ಅ. ೧೪- ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್‌ಗೆ ಪುನರ್ ರಚನೆಗೆ ವರಿಷ್ಠರು ಮುಂದಾಗಿದ್ದು, ಕೆಪಿಸಿಸಿಗೆ ನೂತನ ಕಾರ್ಯಾಧ್ಯಕ್ಷರು ಸೇರಿದಂತೆ ಹೊಸದಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲು ಮುಂದಾಗಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ಈಗಾಗಲೇ ತಯಾರಿ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ತನ್ನದೇ ಆದ ರಣತಂತ್ರಗಳನ್ನು ರೂಪಿಸಿದ್ದು, ಅದರಂತೆ ಕೆಪಿಸಿಸಿ ಪುನಾರಚನೆಗೂ ಮುಂದಾಗಿದೆ.
ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಈಶ್ವರಖಂಡ್ರೆ, ಬಾಲಚಂದ್ರ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಇವರುಗಳು ಸಚಿವರಾಗಿದ್ದು, ಇವರುಗಳಿಗೆ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿ ನೀಡಲು ವರಿಷ್ಠರು ನಿರ್ಧರಿಸಿದ್ದು, ಇವರನ್ನು ಕಾರ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡಿ, ಚುನಾವಣಾ ಜವಾಬ್ದಾರಿಗಳನ್ನು ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ.
ವರಿಷ್ಠರ ಈ ತೀರ್ಮಾನದ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಹೊಸ ಮುಖಗಳು ನೇಮಕವಾಗಲಿದ್ದು, ಮಾಜಿ ಸಚಿವರುಗಳಾದ ವಿನಯ್ ಕುಲಕರ್ಣಿ, ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸಂಸದ ಜೆ.ಸಿ. ಚಂದ್ರಶೇಖರ್ ಹಾಗೂ ಹಿರಿಯ ಮುಖಂಡ ವಸಂತ ಕುಮಾರ್ ಅವರ ಹೆಸರುಗಳು ಕೇಳಿ ಬರುತ್ತಿವೆ.
ವಿವಿಧ ಜಾತಿ, ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಲಾಗಿದ್ದು, ಸದ್ಯದಲ್ಲೆ ವಿನಯ್ ಕುಲಕರ್ಣಿ, ಅಂಜಲಿ ನಿಂಬಾಳ್ಕರ್, ಜೆ.ಸಿ. ಚಂದ್ರಶೇಖರ್, ವಿನಯ್ ಕುಮಾರ್ ಸೊರಕೆ, ವಸಂತಕುಮಾರ್ ಇವರುಗಳುನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆಗಳು ಹೆಚ್ಚಿವೆ.
ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ಬದಲಾವಣೆ
ನೂತನ ಕಾರ್ಯಾಧ್ಯಕ್ಷರುಗಳ ಜತೆಗೆ ಕೆಪಿಸಿಸಿಗೆ ನೂತನ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ, ಕಾರ್ಯದರ್ಶಿ ನೇಮಕವೂ ಆಗಲಿದ್ದು, ವಿವಿಧ ಜಿಲ್ಲೆಗಳ ಅಧ್ಯಕ್ಷರುಗಳನ್ನೂ ಬದಲಿಸುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಪಿಸಿಸಿ ಪುನರ್ ರಚನೆ ನಡೆದಿದ್ದು, ಎಲ್ಲ ಜಾತಿ, ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿ ಎಲ್ಲರನ್ನು ಚುನಾವಣೆಯಲ್ಲಿ ಸಕ್ರೀಯಗೊಳಿಸಲು ಕಾರ್ಯತಂತ್ರ ರೂಪಿಸಲಾಗಿದೆ.
ದಸರಾ ನಂತರ ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕದ ಜತೆಗೆ ಕೆಪಿಸಿಸಿಗೂ ನೂತನ ಪದಾಧಿಕಾರಿಗಳ ನೇಮಕ ಆಗಲಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಹೇಳಿವೆ.
ವಿವಿಧ ನಿಗಮ ಮಂಡಳಿಗಳಿಗೆ ಶಾಸಕರುಗಳನ್ನು ಹಾಗೂ ಪ್ರಮುಖ ಕಾರ್ಯಕರ್ತರುಗಳನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಬಂಧ ಚರ್ಚೆಗಳು ನಡೆದಿದ್ದು, ಕಳೆದ ವಾರ ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವರಿಷ್ಠರಿಗೆ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಸಲ್ಲಿಸಿದ್ದು, ಹೈಕಮಾಂಡ್ ಈ ಪಟ್ಟಿಗೆ ಒಪ್ಪಿಗೆ ನೀಡಿದರೆ ವಿಜಯದಶಮಿ ವೇಳೆಗೆ ಶಾಸಕರುಗಳಿಗೆ ನಿಮಗ ಮಂಡಳಿ ಅಧ್ಯಕ್ಷಗಿರಿಯ ಪಟ್ಟ ಸಿಗಲಿದೆ.