ಕೆಪಿಸಿಸಿ ನಿರ್ದೇಶನದಂತೆ ಮೇಯರ್, ಉಪಮೇಯರ್ ಆಯ್ಕೆ:ನಾಗೇಂದ್ರ

ಬಳ್ಳಾರಿ, ಮೇ.01: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಸ್ಪಷ್ಟ ಬಹುಮತ ನೀಡಿದ್ದಾರೆ. ಕೆಪಿಸಿಸಿ ಮಾರ್ಗದರ್ಶನದಂತೆ ನೂತನ ಮೇಯರ್, ಉಪಮೇಯರ್ ಆಯ್ಕೆ ನಡೆಯಲಿದೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಪಾಲಿಕೆಗೆ ಚುನಾವಣೆ ಘೋಷಣೆ ಆದತಕ್ಷಣ ಪಕ್ಷದ ಸಿ.ಎಲ್.ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ಮಾರ್ಗದರ್ಶನ ಮತ್ತು ಸೂಚನೆಯಂತೆ ಜಿಲ್ಲೆಯಲ್ಲಿನ ಎಲ್ಲಾ ಮುಖಂಡರನ್ನು ಒಗ್ಗೂಡಿಸಿಕೊಂಡು ಅಭ್ಯರ್ಥಿಗಳ ಆಯ್ಕೆ ಪ್ರಚಾರ ಕಾರ್ಯ ನಡೆಸಿತು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲದೇ ಇರದೆ ಒಗ್ಗಟ್ಟಾಗಿರುವುದಕ್ಕೆ ಈ ರೀತಿ ಫಲಿತಾಂಶ ಬಂದಿದೆ. ಮುಂಬರುವ ಚುನಾವಣೆಗಳಿಗೆ ಈ ಫಲಿತಾಂಶ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆಂದರು.
ಟಿಕೆಟ್ ಗಾಗಿ ಸಣ್ಣ ಪುಟ್ಟ ವ್ಯತ್ಯಾಸಗಳು ಬಂದಿದ್ದವು. ಹಿರಿಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ದಿವಾಕರಬಾಬು, ಸೂರ್ಯನಾರಾಯಣರೆಡ್ಡಿ, ನಾಸೀರ್ ಹುಸೇನ್, ಅನಿಲ್ ಲಾಡ್ ಅವರುಗಳ ಸಹಕಾರ, ಮುಖಂಡರುಗಳಾದ ಅಲ್ಲಂ ಪ್ರಶಾಂತ್, ಮುಂಡರಗಿ ನಾಗರಾಜ್, ಮಾನಯ್ಯ, ಆಂಜನೇಯುಲು, ಜಿಲ್ಲಾ ಅಧ್ಯಕ್ಷ ರಫೀಕ್, ಮಾಜಿ ಮೇಯರ್ ವೆಂಕಟರಮಣ ಹೀಗೆ ಎಲ್ಲರು ಸಮಯಕ್ಕೆ ಸರಿಯಾದ ರೀತಿಯಲ್ಲಿ ಎಲ್ಲಾ ವಾರ್ಡುಗಳಲ್ಲಿ ಸಂಚರಿಸಿ ಪ್ರಚಾರ ಮಾಡಿತು. ಮತದಾರರು ಆಶೀರ್ವಾದ ಮಾಡಿದ್ದಾರೆ. ಮೇಯರ್, ಉಪಮೇಯರ್ ಯಾರು ಆಗಬೇಕೆನ್ನುವುದು ಕೆಪಿಸಿಸಿ ಮಾರ್ಗದರ್ಶನದಂತೆ ಮುಖಂಡರು, ಪಾಲಿಕೆ ಸದಸ್ಯರು ಸಭೆ ನಡೆಸಿ ನಿರ್ಧರಿಸಲಿದ್ದಾರೆ.
ತೆರಿಗೆ ಕಡಿತ
ಪ್ರಣಾಳಿಕೆಯಲ್ಲಿ ತಿಳಿದಂತೆ ಪಾಲಿಕೆಯಲ್ಲಿನ ಆಸ್ತಿ ತೆರಿಗೆಯನ್ನು ಜನಸಾಮಾನ್ಯರಿಗೆ ಹೊರೆಯಾಗದಂತೆ ಈಗ ಹೆಚ್ಚಿಸಿರುವುದನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಕಡಿತಗೊಳಿಸಲಿದೆಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪಕ್ಷದ ವರ್ಚಸ್ಸು
ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ವರ್ಚಸ್ಸು ಕಡಿಮೆಯಾಗಿರುವುದರಿಂದ ಕಾಂಗ್ರೆಸ್ ಗೆ ಹೆಚ್ಚಿನ ಬಲಬಂದಂತಾಗಿದೆ. ಅಲ್ಲವೇ ಎಂಬ ಪ್ರಶ್ನೆಗೆ ಅದು ಹಾಗಲ್ಲ ಬಿಜೆಪಿ ಪಕ್ಷದ ವರ್ಚಸೇ ಕಡಿಮೆಯಾಗುತ್ತಿದೆಂದರು.
ಇಂಡಿಪೆಂಡೆಂಟ್ ನಮ್ಮವರೇ
ನಗರದ 5 ವಾರ್ಡುಗಳಲ್ಲಿ ಆಯ್ಕೆಯಾಗಿರುವ ಐದು ಜನ ಇಂಡಿಪೆಂಡೆಂಟ್ ಅಭ್ಯರ್ಥಿಗಳೂ ಸಹ ನಮ್ಮವರೇ ಆಗಿದ್ದಾರೆ. ಅವರು ನಮ್ಮೊಂದಿಗೆ ಪಾಲಿಕೆ ಆಡಳಿತದಲ್ಲಿ ಜೊತೆ ಆಗಲಿದ್ದಾರೆ. ಟಿಕೆಟ್ ದೊರೆಯದೇ ಪಕ್ಷೇತರರಾಗಿದ್ದರು. ಸಾಮಾಜಿಕ ನ್ಯಾಯ ಮೊದಲಾದ ಕಾರಣಗಳಿಂದ ಅವರಿಗೆ ಟಿಕೆಟ್ ನೀಡಲು ಆಗಿರಲಿಲ್ಲ ಎಂದು ಸಮರ್ಥಿಸಿಕೊಂಡರು.

ದಬ್ಬಾಳಿಕೆ ಬೇಡ
ಪಾಲಿಕೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ನಗರದ 29, 31, 32ನೇ ವಾರ್ಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ, ಅಭ್ಯರ್ಥಿಗಳ ಮನೆಗಳಿಗೆ ತೆರಳಿ ಗಲಾಟೆ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಎಸ್ಪಿ, ಡಿಸಿಗೆ ಮಾಹಿತಿ ನೀಡಿದೆ. ಏನಾದರೂ ತಪ್ಪು ಜರುಗಿದರೆ ಅದಕ್ಕೆ ಬಿಜೆಪಿಯೇ ಹೊಣೆ ಆಗಲಿದೆಂದರು.