ಕೆಪಿಸಿಎಲ್ ನಿಂದ ಬೂದಿಗುಡ್ಡ ಸಂರಕ್ಷಣೆ

ಬಳ್ಳಾರಿ, ನ.8: ಇಲ್ಲಿಗೆ ಸಮೀಪದ ಕುಡಿತಿನಿ ಮತ್ತು ತೋರಣಗಲ್ಲು ಮಧ್ಯೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇರುವ ಬೂದಿಗುಡ್ಡದ ಸಂರಕ್ಷಣೆ ಕಾರ್ಯಕ್ಕೆ 50ಲಕ್ಷ ರೂಗಳ ವೆಚ್ಚದ ಪ್ರಸ್ತಾವನೆಯನ್ನು ಬ್ರೂಸ್ ಫ್ರೂಟ್ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯ ಸಮಿತಿ ಸಲ್ಲಿಸಿದೆಂದು ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯಿಂದ ಪ್ರಗೈತಿಹಾಸಿಕ ಇತಿಹಾಸವುಳ್ಳ ಬೂದಿಗುಡ್ಡಕ್ಕೆ ಧಕ್ಕೆ ಬರುವ ರೀತಿಯಲ್ಲಿತ್ತು. ಆದರೆ ಸ್ಥಳೀಯ, ಇತಿಹಾಸಜ್ಞರು, ಪರಿಸರ ಪ್ರೇಮಿಗಳು ಅದನ್ನು ಸಂರಕ್ಷಿಸಿ ಹೆದ್ದಾರಿ ಅಭಿವೃದ್ಧಿ ಮಾಡಬೇಕೆಂದಿದ್ದರು. ಈ ನಿಟ್ಟಿನಲ್ಲಿ ಈ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದ್ದಾರೆ.
ಈ ಹಿಂದೆ 2017ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಗುತ್ತಿಗೆದಾರರೇ ಬೂದಿಗುಡ್ಡ ಸಂರಕ್ಷಣೆಗೆ ಸಮ್ಮತಿಸಿದ್ದರು. ಆದರೆ ಅವರೇ ರಸ್ತೆ ಕಾಮಗಾರಿ ಅರ್ಧ ಮಾಡಿ ನಿಲ್ಲಿಸಿದ್ದರಿಂದ ಬೂದಿಗುಡ್ಡದ ಸಂರಕ್ಷಣೆ ಕಾರ್ಯವೂ ಆಗಲಿಲ್ಲ.
ಈ ಸಂದರ್ಭದಲ್ಲಿ ಬಿ.ಟಿ.ಪಿ.ಎಸ್ ಮುಖ್ಯ ಇಂಜಿನೀಯರ್ ಪ್ರೇಮನಾಥ್ ವಸ್ತು ಸಂಗ್ರಹಾಲಯ ಸಮಿತಿಯ ಪ್ರೊ|| ಕೋರಿ ಶೆಟ್ಟರ್, ಎಂ.ಅಹಿರಾಜ್ ಮೊದಲಾದವರನ್ನು ಕರೆದು ಬೂದಿಗುಡ್ಡ ಸಂರಕ್ಷಣೆಗೆ ಏನು ಮಾಡಬೇಕು ಎಂದು ಹೇಳಿದ್ದರು.
ಬೂದಿಗುಡ್ಡದ ಸುತ್ತ ಗೋಡೆ ನಿರ್ಮಾಣ, ಗಿಡಗಳನ್ನು ನೆಡುವುದು, ರೇಲಿಂಗ್ ಮೊದಲಾಗಿ ಸೇರಿದಂತೆ 50 ಲಕ್ಷ ರೂ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಲ್ಲಮೂಲಗಳ ಪ್ರಕಾರ ಕೆಪಿಎಲ್ ನ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನರಾಜ್ ಸಮ್ಮತಿಸಿದ್ದಾರೆಂದು ತಿಳಿದುಬಂದಿದೆ.
ಯರಗು‌ಡಿ ಬಿ.ಟಿ.ಪಿ.ಎಸ್.ನ ಕಾನೂನು ಸಲಹೆಗಾರ ರಂಗನಾಥರಾವ್ ಮಾರ್ಗದರ್ಶನದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆಯಂತೆ. ಸದ್ಯದಲ್ಲೇ ಇದಕ್ಕೆ ಅಂತಿಮ ಆದೇಶ ಹೊರಬೀಳಲಿದ್ದು ಸಂರಕ್ಷಣಾ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆಂದು ಇದಕ್ಕಾಗಿ ಹೋರಾಟ ಮಾಡಿದ ಸಂತೋಷ್ ಮಾರ್ಟಿನ್ ಹೇಳುತ್ತಾರೆ.
ಒಟ್ಟಾರೆ ಪ್ರಗೈತಿಹಾಸಿಕದ ಈ ಕುರುಹಿನ ಸಂರಕ್ಷಣೆ ಇತಿಹಾಸ ಪ್ರಿಯರಿಗೆ ಈ ಬೆಳವಣಿಗೆ ಸಂತಸವನ್ನು ನೀಡಲಿದೆ.