ಕೆಪಿಟಿಸಿಎಲ್ ನೇಮಕಾತಿ ಅಕ್ರಮ ಕಿಂಗ್‌ಪಿನ್ ಬಂಧನ

ಬೆಂಗಳೂರು,ಸೆ.೩- ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಪಿಟಿಸಿಎಲ್ ವಿವಿಧ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದ ಅಕ್ರಮದ ಕಿಂಗ್‌ಪಿನ್ ಬೆಳಗಾವಿ ಜಿಲ್ಲಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಪರೀಕ್ಷೆಯ ಅಕ್ರಮದ ಕಿಂಗ್ ಪಿನ್ ಎಂದೇ ಕರೆಯಲಾಗುತ್ತಿದ್ದ ಗೋಕಾಕ್ ತಾಲೂಕಿನ ಸಂಜೀವ ಲಕ್ಷ್ಮಣ ಭಂಡಾರಿ ಬಂಧಿತ ಆರೋಪಿಯಾಗಿದ್ದು ಈತನ ಬಂಧನದಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೧೩ಕ್ಕೇರಿದೆ.
ಬಂಧಿತ ಆರೋಪಿಯನ್ನು ಪೊಲೀಸರು ಗೋಕಾಕ್‌ನ ಪ್ರಿನ್ಸಿಪಲ್ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ೭ದಿನಗಳ ವರೆಗೆ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಕಳೆದ ಆ.೭ರಂದು ಕೆಪಿಟಿಸಿಎಲ್‌ನ ಕಿರಿಯ ಅಭಿಯಂತರ (ಜೆಇ) ನೇಮಕಾತಿ ಪರೀಕ್ಷೆ ಸಮಯದಲ್ಲಿ ಗೋಕಾಕ್ ನಗರದ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಆರೋಪಿ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಸ್ಮಾರ್ಟ್ ವಾಚ್‌ನ ಕ್ಯಾಮೆರಾ ಮೂಲಕ ಪ್ರಶ್ನೆಪತ್ರಿಕೆಯನ್ನು ಫೋಟೋ ತೆಗೆದು ಟೆಲಿಗ್ರಾಂ ಮೂಲಕ ಪ್ರಮುಖ ಆರೋಪಿ ಸಂಜೀವ ಭಂಡಾರಿಗೆ ರವಾನಿಸಿದ್ದರು.
ಈ ಅಕ್ರಮದ ಕುರಿತು ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸಂಜೀವ ಭಂಡಾರಿ ತಲೆಮರೆಸಿಕೊಂಡಿದ್ದರು. ಅಲ್ಲದೇ ವಕೀಲರ ಮೂಲಕ ಎರಡು ಬಾರಿ ಜಾಮೀನಿಗಾಗಿ ಸಂಜು ಭಂಡಾರಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಆರೋಪಿಯ ಅರ್ಜಿಯನ್ನು ತಿರಸ್ಕರಿಸಿತು.
ಇತ್ತ, ಆರೋಪಿ ಸಂಜೀವ ಭಂಡಾರಿ ಪರೀಕ್ಷಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬ್ಲೂಟೂತ್ ಡಿವೈಸ್‌ಗಳನ್ನು ರವಾನಿಸುತ್ತಿದ್ದರು. ಈಗ ಪೊಲೀಸರು ಬ್ಲೂಟೂತ್ ಡಿವೈಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಂಜೀವ ಪೊಲೀಸ್ ಕಾನ್ಸ್‌ಟೇಬಲ್ ಮಗನಾಗಿದ್ದು, ಈ ಹಿಂದೆ ನಡೆದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಅಕ್ರಮದಲ್ಲೂ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದು ತಮ್ಮ ಹಳೆಯ ಚಾಳಿ ಮುಂದುವರಿಸಿದ್ದ ಎಂದು ತಿಳಿದುಬಂದಿದೆ.