ಕೆಪಿಎಸ್ ಶಾಲೆಗೆ ಡಯಟ್ ಪ್ರಾಂಶುಪಾಲ ಭೇಟಿ

ಕೋಲಾರ,ಏ.೧೭: ತಾಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಗೆ ಡಯಟ್ ಪ್ರಾಂಶುಪಾಲರು ಹಾಗೂ ಅಭಿವೃದ್ದಿ ಉಪನಿರ್ದೇಶಕ ನಾಗೇಶ್ ಭೇಟಿ ನೀಡಿದ್ದರು.
ಭೇಟಿಯ ಸಂದರ್ಭದಲ್ಲಿ ಶಾಲೆಯ ಎಸ್‌ಎಸ್‌ಎಲ್‌ಸಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಲು ಅಗತ್ಯ ಸಲಹೆಗಳನ್ನು ನೀಡಿದರು.
ಕೋಲಾರ ಜಿಲ್ಲೆ ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಫಲಿತಾಂಶದಲ್ಲಿ ೫ನೇ ಹಾಗೂ ಗುಣಾತ್ಮಕತೆಯಲ್ಲಿ ೨ನೇ ಸ್ಥಾನ ಗಳಿಸಿದೆ, ಇದು ಪ್ರಥಮ ಸ್ಥಾನವಾಗಬೇಕು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವನ್ನು ತಪ್ಪದೇ ಪಾಲಿಸಿ ಶ್ರಮವಹಿಸಿ ಎಂದು ಕಿವಿಮಾತು ಹೇಳಿದರು.
ಶೇ.೩೦ ರಷ್ಟು ಪಠ್ಯ ಕಡಿತಗೊಂಡಿದೆ, ಇರುವ ಸಮಯದಲ್ಲಿ ಚೆನ್ನಾಗಿ ಓದಿ, ಬೇಸಿಗೆ ಆರಂಭವಾಗಿದ್ದು, ಹೆಚ್ಚು ನೀರು ಕುಡಿಯಿರಿ, ಆರೋಗ್ಯ ರಕ್ಷಣೆಗೆ ಒತ್ತು ನೀಡಿ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಪ್ರತಿ ವಿದ್ಯಾರ್ಥಿಯೊಂದಿಗೂ ಸಂವಾದ ನಡೆಸಿದ ಅವರು, ಕಲಿಕಾ ವಿಧಾನ,ಮುಂದಿನ ಗುರಿ, ಸಮಯಪಾಲನೆ ಮತ್ತಿತರ ಅಂಶಗಳ ಕುರಿತು ಮಾಹಿತಿ ಪಡೆದು ಮತ್ತಷ್ಟು ಶ್ರದ್ಧೆ ಹೆಚ್ಚಿಸಿಕೊಳ್ಳಿ ಎಂದರು.
ಇಲಾಖೆ ನೀಡಿರುವ ಮಾದರಿ ಪ್ರಶ್ನೆಪತ್ರಿಕೆ ಅಭ್ಯಾಸ ಮಾಡಿ, ಈಗಾಗಲೇ ‘ನನ್ನನ್ನೊಮ್ಮೆ ಗಮನಿಸಿ ಪ್ರಶ್ನೋತ್ತರ ಕೋಠಿ ತಯಾರಾಗುತ್ತಿದ್ದು, ಅದು ಶಾಲೆಗಳಿಗೆ ಸಿಗಲಿದೆ, ಇದರ ಸದುಪಯೋಗವನ್ನೂ ಪಡೆಯಿರಿ ಎಂದು ಕರೆ ನೀಡಿದರು.
ಪರೀಕ್ಷೆ ಸಮೀಪಿಸುತ್ತಿದ್ದು, ಇನ್ನುಳಿದ ದಿನಗಳಲ್ಲಿ ಪರೀಕ್ಷೆಗೆ ಹೇಗೆಲ್ಲಾ ತಯಾರಿ ನಡೆಸಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು, ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವ ಕುರಿತಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಡಯಟ್‌ನ ಹಿರಿಯಉಪನ್ಯಾಸಕಿ ಚಂದ್ರಕಲಾ, ಪಂಕಜ ಹಾಜರಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಓ.ಮಲ್ಲಿಕಾರ್ಜುನ ಮತ್ತು ಸಿಬ್ಬಂದಿ ಡಯಟ್ ಪ್ರಾಂಶುಪಾರು ಹಾಗೂ ಡಿಡಿಪಿಐ ನಾಗೇಶ್‌ರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀನಿವಾಸ್, ಶೀಲಕುಮಾರಿ, ರಾಮಲಿಂಗಪ್ಪ, ಶಿವಪ್ಪ, ರಾಮಾಂಜಪ್ಪ , ಸಿ.ವಿ.ಶ್ರೀನಾಥ್, ವಹೀದಾ, ಸಯೀದಾ, ರಾಧಾ, ಭಾಗ್ಯಶ್ರೀ, ಸೌಮ್ಯ, ರಾಧಿಕಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.