ಕೆಪಿಎಸ್ಸಿ ಆಡಳಿತ ಮಂಡಳಿಯ ಸಂಘರ್ಷದಿಂದ ಆಯಾ ಇಲಾಖೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಬೀದಿಪಾಲು ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಸಮಿತಿ ಆಗ್ರಹ

ಕಲಬುರಗಿ:ಜ.21:ಕೆಪಿಎಸ್ಸಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಹಾಗೂ ಸದಸ್ಯರುಗಳ ಮಧ್ಯ ನಡೆಯುತ್ತಿರುವ ಸಂಘರ್ಷದಿಂದ ಲೋಕಸೇವಾ ಆಯೋಗದಿಂದ ಅಯಾ ಇಲಾಖೆಗೆ ಆಯ್ಕೆಯಾದ ಅರ್ಹ ಫಲಾನುಭವಿ ಅಭ್ಯರ್ಥಿಗಳು ಬೀದಿಪಾಲಾಗಿ ಪರದಾಡುತ್ತಿದ್ದಾರೆ ವಿಶೇಷವಾಗಿ 371ನೇ ಜೇ ಕಲಂ ಮೀಸಲಾತಿ ಅಡಿ ಆಯ್ಕೆಯಾದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಭರಿಸಲಾರದಷ್ಷು ಅನ್ಯಾಯವಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.
ಪ್ರಸ್ತುತ ಕೆಪಿಎಸ್ಸಿಯಲ್ಲಿಯ ಸಮನ್ವಯತೆ ಕೊರತೆ ಮತ್ತು ಆಡಳಿತ ಮಂಡಳಿಯ ಸಂಘರ್ಷದ ವಾತಾವರಣವನ್ನು ಗಂಭೀರವಾಗಿ ಪರಿಗಣಿಸಿ ಆಯಾ ಇಲಾಖೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಹಿತ ದೃಷ್ಟಿಯಿಂದ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಖಡ್ಕ ಎಚ್ಚರಿಕೆ ನೀಡಿ ಲೋಕಸೇವಾ ಆಯೋಗದ ಕಾರ್ಯಾಕಲಾಪಗಳು ಸುಸೂತ್ರವಾಗಿ ನಡೆಯುವಂತೆ ಅಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಅಯೋಗದ ಸದಸ್ಯರುಗಳಿಗೆ ಆದೇಶ ನೀಡಲು ಸಮಿತಿ ರಾಜ್ಯಪಾಲರಿಗೆ ವಿಶೇಷ ಮನವರಿಕೆ ಮಾಡಿದೆ.
ಕಳೆದ ಒಂದು ವರ್ಷ ಮತ್ತು ಒಂದುವರೆ ವರ್ಷದ ಹಿಂದೆ ಆಯಾ ಇಲಾಖೆಗಳಿಗೆ ಮೊದಲನೇ ಪಟ್ಟಿಯಲ್ಲಿ ಆಯ್ಕೆಯಾಗಿ ಅಂತಿಮ ಪಟ್ಟಿಗಾಗಿ ತಮ್ಮ ತಮ್ಮ ಭವಿಷ್ಯಕ್ಕಾಗಿ ಭಾರಿ ಆಸೆ ಇಟ್ಟುಕೊಂಡು ಕಾಯುತ್ತಿದ್ದಾರೆ, ನಿಯಮಾನುಸಾರ ಮೊದಲನೇ ಪಟ್ಟಿ ಪ್ರಕಟಿಸಿದ ನಂತರ ಒಂದೆರಡು ತಿಂಗಳಲ್ಲಿ ಅಂತಿಮ ಪಟ್ಟಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಆದರೆ ಪ್ರಸ್ತುತ ಕೆಪಿಎಸ್ಸಿಯಲ್ಲಿಯ ಆಡಳಿತ ಮಂಡಳಿಯ ಸಂಘರ್ಷದಿಂದ ಸಹಸ್ರಾರು ಫಲಾನುಭವಿ ಅಭ್ಯರ್ಥಿಗಳು ಬೀದಿಪಾಲಾಗಿ ಮಂತ್ರಿಗಳು, ಶಾಸಕರು, ಪರಿಣಿತ ಹೋರಾಟಗಾರರ ಮನೆಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆಈ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಸರ್ಕಾರದಿಂದ ಕೆಪಿಎಸ್ಸಿ ಆಡಳಿತ ಮಂಡಳಿಗೆ ನಿಯಮನುಸಾರ ಕಾರ್ಯ ನಿರ್ವಹಿಸಲು ಸೂಚಿಸಬೇಕು ಅದರಂತೆ ಸರ್ಕಾರದ ವತಿಯಿಂದ ರಾಜ್ಯಪಾಲರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿಸಿ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲು ಸಮಿತಿ ಸರ್ಕಾರಕ್ಕೆ ಒತ್ತಾಯಿಸುತ್ತದೆ.ಸರ್ಕಾರ ಮತ್ತು ರಾಜ್ಯಪಾಲರು ಈ ಗಂಭೀರ ವಿಷಯದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸಮಿತಿ ಕಲ್ಯಾಣ ಕರ್ನಾಟಕದ ಸಹಸ್ರಾರು ಫಲಾನುಭವಿ ಅಭ್ಯರ್ಥಿಗಳನ್ನು ಕರೆದುಕೊಂಡು ಕೆಪಿಎಸ್ಸಿ ಆಡಳಿತ ಕಛೇರಿ ಮುಂದೆ ಉಗ್ರ ಹೋರಾಟ ನಡೆಸುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.