ಕೆನರಾ ಬ್ಯಾಂಕ್‌ನ ಸಮಾಜ ಸೇವೆ ಶ್ಲಾಘನೀಯ; ಮೇಯರ್ ವಿರೇಶ್

ದಾವಣಗೆರೆ.ಜೂ.೧೦; ಕೆನರಾ ಬ್ಯಾಂಕ್ ದೇಶಕ್ಕಾಗಿ ಹಣಕಾಸು ಸೇವೆಯನ್ನು ಸಲ್ಲಿಸುವುದರ ಜೊತೆಗೆ ಸಾಮಾಜಿಕ ಭಾಧ್ಯತೆಯಿಂದ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮೇಯರ್ ಎಸ್.ಟಿ‌.ವೀರೇಶ್  ಮೆಚ್ಚುಗೆ ವ್ಯಕ್ತಪಡಿಸಿದರು.  ಅವರು ಕೆನರಾ ಬ್ಯಾಂಕ್ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಕೋರೋನಾ ಸಂತ್ರಸ್ತರಿಗೆ, ಕೋರೋನಾ ವಾರಿಯರ್ಸ‌ಗಳಿಗೆ ಹಾಗೂ ಕೋರೋನಾ ಸಂತ್ರಸ್ತರ ಪರಿಚಾರಕರಿಗೆ ಉಚಿತ ಆಹಾರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಕೋರೋನಾದ ಈ ಸಂಕಷ್ಟ ಕಾಲದಲ್ಲಿ ಅನೇಕ ಸಂಘ ಸಂಸ್ಥೆಗಳು ಸೇವಾ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರಕಾರದೊಂದಿಗೆ ಕೈಜೋಡಿಸಿ ಕೋರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿವೆ. ಇದರಿಂದ ಸರಕಾರದ ಕೆಲಸ ಸ್ವಲ್ಪ ಸುಲಭವಾಗಿದೆ. ಬ್ಯಾಂಕ್ ಉದ್ಯೋಗಿಗಳು ಸಹ ಕೋರೋನಾ ಅಪಾಯದ ಸಂದರ್ಭದಲ್ಲಿಯೂ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಕೈಂಕರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು. ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯದ ವಿಭಾಗೀಯ ಪ್ರಬಂಧಕರಾದ ಜಿ.ಆರ್.ನಾಗರತ್ನ ಅವರು ಮಾತನಾಡಿ ಕೆ‌ನರಾ ಬ್ಯಾಂಕ್ ತನ್ನ ಸಾಮಾಜಿಕ ಭಾದ್ಯತೆಯ ಭಾಗವಾಗಿ ಕೋರೋನಾ ಜಾಗೃತಿ ಅಭಿಯಾನ, ಉಚಿತವಾಗಿ ಆಹಾರ ವಿತರಣೆ, ಮಾಸ್ಕ್ ವಿತರಣೆ, ಸಾನಿಟೈಸರ್ ವಿತರಣೆಗಳ ಜೊತೆಗೆ ಜಿಲ್ಲಾಸ್ಪತ್ರೆಗೆ ಅಗತ್ಯ ಸಲಕರಣೆಗಳನ್ನೂ ಕೊಡುಗೆಯಾಗಿ ನೀಡಿದೆ. ಕೋರೋನಾ ಸಂತ್ರಸ್ತರಿಗೆ ಮತ್ತು ಆಸ್ಪತ್ರೆಗಳಿಗೆ ಹಲವಾರು ಸಾಲ ಯೋಜನೆಗಳನ್ನೂ ಜಾರಿದೆ ತಂದಿದೆ. ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಲು ಮನವಿ ಮಾಡಿದರು.
ಈ ವೇಳೆ ಪಾಲಿಕೆ ಸದಸ್ಯ ಶಿವನಗೌಡ ಟಿ ಪಾಟೀಲ್, ಕೆ‌.ರಾಘವೇಂದ್ರ ನಾಯರಿ, ಎಸ್.ವಿ.ರಾಮಕೃಷ್ಣ ನಾಯ್ಕ್, ಬಿ.ಎ.ಸುರೇಶ್, ಹಂಪಣ್ಣ, ಕೆ.ಶಶಿಕುಮಾರ್,  ಕೆ.ವಿಶ್ವನಾಥ ಬಿಲ್ಲವ, ಆರ್.ಆಂಜನೇಯ, ಸಿ.ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.