ಕೆನರಾ ಬ್ಯಾಂಕ್‌ನಲ್ಲಿ ಸಂಸ್ಥಾಪಕರ ದಿನಾಚರಣೆ

ಕೋಲಾರ,ನ.೨೦: ಕೆನರಾ ಬ್ಯಾಂಕ್ ಅಮ್ಮೆಂಬಾಳ ಸುಬ್ಬರಾವ್ ಪೈ ಅವರಿಂದ ೧೯೦೬ ರಲ್ಲಿ ಆರಂಭಗೊಂಡಿದ್ದು, ಇಂದು ದೇಶಾದ್ಯಂತ ೧೦ ಸಾವಿರ ಶಾಖೆಗಳನ್ನು ಹೊಂದಿದೆ ಎಂದು ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಅಂಬಾಜಿ ನವಲೆ ತಿಳಿಸಿದರು.
ನಗರದ ಬ್ಯಾಂಕಿನ ಕಚೇರಿಯಲ್ಲಿ ಬ್ಯಾಂಕ್ ೧೧೬ ನೇ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥಾಪಕ ದಿವಂಗತ ಅಮ್ಮೆಂಬಾಲ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮಂಗಳೂರಿನಲ್ಲಿ ಕೇವಲ ಒಂದು ಶಾಖೆಯಾಗಿ ಆರಂಭಗೊಂಡ ಕೆನರಾ ಬ್ಯಾಂಕ್ ಇಂದು ಬೃಹದಾಕಾರವಾಗಿ ಬೆಳೆದಿದೆ ಸುಮಾರು ೧೬ ಲಕ್ಷ ಕೋಟಿರೂಗಳ ವಹಿವಾಟು ನಡೆಸುತ್ತಿದ್ದು, ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸುವ ಮೂಲಕ ನೆರವಾಗಿದೆ ಎಂದು ತಿಳಿಸಿದರು.
ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೆನರಾ ಬ್ಯಾಂಕ್ ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ ಆಗಿಯೂ ಜನಪರ,ರೈತಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಅನ್ನದಾತರಿಗೆ ಅಗತ್ಯವಾದ ಸಾಲಸೌಲಭ್ಯ, ಮನೆ ಸಾಲ, ಚಿನ್ನಾಭರಣ ಸಾಲ, ಕೈಗಾರಿಕೆ ಸ್ಥಾಪನೆಗೆ ನೆರವು ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ದಿ ಚಟುವಟಿಕೆಗಳಿಗೆ ಬ್ಯಾಂಕ್ ಸಾಲಸೌಲಭ್ಯ ಒದಗಿಸುತ್ತಿದೆ ಎಂದು ವಿವರಿಸಿದರು.
ಬ್ಯಾಂಕಿನ ಧ್ಯೇಯವೇ ಗ್ರಾಹಕ ಸೇವೆಯಾಗಿದ್ದು, ಗ್ರಾಹಕರ ಹಿತ ರಕ್ಷಣೆಗೆ ನಮ್ಮ ಪ್ರತಿ ಶಾಖೆಯಲ್ಲೂ ಒತ್ತು ನೀಡಲಾಗಿದೆ ಎಂದು ತಿಳಿಸಿದರು.ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಮ್ಮೆಂಬಾಳ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬ್ಯಾಂಕಿಗೆ ಬಂದ ಗ್ರಾಹಕರಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಉಪೇಂದ್ರ, ಸಿಬ್ಬಂದಿ ರವಿಕುಮಾರ್, ಮೀನಾ ರಾಬರ್ಟ್, ಅನುದೀಪ್, ಬಾಲಸಾಯಿ, ರಂಗಣ್ಣ ಮತ್ತಿತರರಿದ್ದರು