ಟೊರಂಟೊ (ಕೆನಡಾ), ಸೆ.೨೭- ಈಗಾಗಲೇ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿ, ಸದ್ಯ ಸಂಕಷ್ಟಕ್ಕೆ ಸಿಲುಕಿರುವ ಕೆನಡಾಗೆ ಇದೀಗ ಮತ್ತೊಂದು ಆಘಾತವಾಗಿದೆ. ಎರಡನೇ ಜಾಗತಿಕ ಯುದ್ಧದಲ್ಲಿ ನಾಝಿ ಸೇನಾ ಘಟಕದಲ್ಲಿ ಹೋರಾಡಿದ್ದ ವ್ಯಕ್ತಿಯನ್ನು ಕೆನಡಾ ಸಂಸತ್ತಿಗೆ ಆಹ್ವಾನ ಮಾಡಿದ ಸಂಬಂಧ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಇದೀಗ ಕೆನಡಾದ ಹೌಸ್ ಆಫ್ ಕಾಮನ್ಸ್ ಸ್ಪೀಕರ್ ರಾಜೀನಾಮೆ ನೀಡಿದ್ದಾರೆ.
ಈ ಸದನದಲ್ಲಿ ಯಾರೂ ನಮಗಿಂತ ಮೇಲಲ್ಲ. ಆದ್ದರಿಂದ ನಾನು ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸುವಲ್ಲಿ ಆಗಿರುವ ಪ್ರಮಾದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸ್ಪೀಕರ್ ರೋಟಾ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷರು ಕೆನಡಾ ಸಂಸತ್ತನ್ನು ಉದ್ದೇಶಿಸಿ ಮಾಡುವ ಭಾಷಣಕ್ಕೆ ಈ ವಿವಾದಾತ್ಮಕ ವ್ಯಕ್ತಿಯನ್ನು ಆಹ್ವಾನಿಸಲಾಗಿತ್ತು. ಶುಕ್ರವಾರ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಕೆನಡಾದ ಹೌಸ್ ಆಫ್ ಕಾಮನ್ಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ಸ್ಪೀಕರ್ ಆಂಟೋನಿ ರೋಟಾ ಅವರು ಈ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದಾಗ, ೯೮ ವರ್ಷ ವಯಸ್ಸಿನ ಯೊರೊಸ್ಲವ್ ಹುಂಕಾ ಅವರಿಗೆ ಎಲ್ಲ ಸಂಸದರು ಎದ್ದು ನಿಂತು ಗೌರವ ಸೂಚಿಸಿದರು. ಉಕ್ರೇನ್ ವಿಭಜನೆಯ ಮೊದಲ ಯುದ್ಧದಲ್ಲಿ ಹೋರಾಡಿದ ವೀರ ಎಂದು ರೋಟಾ ಪರಿಚಯಿಸಿದ್ದರು. ಈ ಬಗ್ಗೆ ವಾರಾಂತ್ಯದಲ್ಲಿ ಹಲವು ಮಂದಿ ವಿಶ್ಲೇಷಕರು ಲೇಖನಗಳನ್ನು ಪ್ರಕಟಿಸಿ ಮೊದಲ ಉಕ್ರೇನ್ ವಿಭಜನೆಗೆ ಹೋರಾಡಿದ ಎಸ್‌ಎಸ್ ೧೪ನೇ ವಾಫೆನ್ ಡಿವಿಷನ್, ನಾಝಿಗಳ ನಿಯಂತ್ರಣದಲ್ಲಿದ್ದ ಸ್ವಯಂಸೇನಾ ಘಟಕ ಎಂದು ಬಣ್ಣಿಸಿದ್ದರು.