ಕೆನಡಾ ಗಾಯಕ ಶುಭ್ ಸಂಗೀತ ಕಾರ್‍ಯಕ್ರಮ ರದ್ದು

ಮುಂಬೈ,ಸೆ.೨೨-ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸಿದ್ದಕ್ಕಾಗಿ ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಪಂಜಾಬಿ-ಕೆನಡಾ ಗಾಯಕ ಶುಭ್ ಅವರ ಸಂಗೀತ ಕಚೇರಿ ‘ಸ್ಟಿಲ್ ರೋಲಿನ್’ ಇಂಡಿಯಾ ಟೂರ್’ ರದ್ದುಗೊಳಿಸಲಾಗಿದೆ.
ಶುಭ್ ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದರಿಂದ ತೀವ್ರ ನಿರಾಸೆಗೊಂಡಿದ್ದಾರೆ.
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಗದ್ದಲದ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್‌ನಿಂದ ಭಾರಿ ಟೀಕೆಗಳನ್ನು ಎದುರಿಸುತ್ತಿರುವ ಪಂಜಾಬಿ-ಕೆನಡಾದ ರಾಪರ್ ಶುಭನೀತ್ ಸಿಂಗ್ ಅವರು ಭಾರತದಲ್ಲಿ ಕಾರ್ಯಕ್ರಮ ರದ್ದಾದ ಬಳಿಕ ರಾಪರ್ ಶುಭ್ನೀತ್ ಸಿಂಗ್ ತಮ್ಮ ನೋವು ತೋಡಿಕೊಂಡಿದ್ದಾರೆ.
ಅವರು ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಭಾರತವು ನನ್ನ ದೇಶವೂ ಆಗಿದೆ. ನಾನೂ ಕೂಡ ಇಲ್ಲೇ ಹುಟ್ಟಿದ್ದು. ಇದು ನನ್ನ ಗುರುಗಳು ಮತ್ತು ನನ್ನ ಪೂರ್ವಜರ ನಾಡು ಎಂದು ಶುಭ್ ಬರೆದುಕೊಂಡಿದ್ದಾರೆ.
ಕಾರ್ಯಕ್ರಮ ರದ್ದುಗೊಳಿಸಿದ್ದರಿಂದ ತೀವ್ರ ಹತಾಶೆ ಅನುಭವಿಸಿದ್ದಾರೆ.
ಪಂಜಾಬಿ-ಕೆನಡಿಯನ್ ರಾಪರ್ ಶುಭ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
ಶುಭ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು ವಿರೂಪಗೊಳಿಸಿದ ಭಾರತದ ನಕ್ಷೆಯನ್ನು ಜಾಲ ತಾಣಗಳಲ್ಲಿ ಬಿಡುಗಡೆ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿ ನಂತರ ಗಾಯಕ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.
ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡು ಶುಭ ಅವರು ಇದಕ್ಕಾಗಿ ೨ ತಿಂಗಳಿಂದ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಕಾರ್ಯಕ್ರಮ ರದ್ದಾದ ಕಾರಣ ಅವರು ತುಂಬಾ ದುಃಖಿತರಾಗಿದ್ದಾರೆ.
ಶುಭ್ ಬರೆದುಕೊಂಡಿದ್ದು ಭಾರತ ನನ್ನ ದೇಶವೂ ಹೌದು. ನನ್ನ ದೇಶದಲ್ಲಿ, ನನ್ನ ಜನರ ಮುಂದೆ ಪ್ರದರ್ಶನ ನೀಡಲು ನಾನು ತುಂಬಾ ಉತ್ಸುಕನಾಗಿದ್ದೆ. ನಾನು ಇದಕ್ಕಾಗಿ ಬಹಳ ಸಮಯದಿಂದ ತಯಾರಿ ನಡೆಸುತ್ತಿದ್ದೆ ಮತ್ತು ಕಳೆದ ೨ ತಿಂಗಳಿಂದ ಮನಃಪೂರ್ವಕವಾಗಿ ಅಭ್ಯಾಸ ಮಾಡುತ್ತಿದ್ದೆ, ಆದರೆ ಅದೃಷ್ಟವು ನನ್ನ ಜೊತೆ ಇರಲಿಲ್ಲ ಪಂಜಾಬ್‌ನಿಂದ ಬರುವ ಯುವ ರಾಪರ್-ಗಾಯಕನಾಗಿ, ನನ್ನ ಸಂಗೀತವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತ ಪಡಿಸುವುದು ನನ್ನ ಜೀವನದ ಕನಸಾಗಿತ್ತು. ಆದರೆ ಇತ್ತೀಚಿನ ಘಟನೆಗಳು ನನ್ನ ಕಠಿಣ ಪರಿಶ್ರಮ ಮತ್ತು ಪ್ರಗತಿಯ ಮೇಲೆ ಪರಿಣಾಮ ಬೀರಿವೆ. ನನ್ನ ನಿರಾಶೆ ಮತ್ತು ದುಃಖವನ್ನು ವ್ಯಕ್ತಪಡಿಸಲು ಪದಗಳು ಇಲ್ಲ ಎಂದಿದ್ದಾರೆ.
ಬುಕ್ ಮೈ ಶೋ ಕಂಪನಿಯು ಶೋಗಾಗಿ ಟಿಕೆಟ್ ಖರೀದಿಸಿದ ಎಲ್ಲರಿಗೂ ಟಿಕೆಟ್ ಹಣವನ್ನು ಮರುಪಾವತಿಸಲು ಪ್ರಾರಂಭಿಸಿದೆ.