ಕೆನಡಾ ಉದ್ಯಮಿ ರಾಣಾನನ್ನು ಭಾರತಕ್ಕೆ ಒಪ್ಪಿಸಲು ಅಮೆರಿಕ ಒಪ್ಪಿಗೆ

ವಾಷಿಂಗ್ಟನ್, ಮೇ.೧೮- ಮುಂಬೈನಲ್ಲಿ ೨೦೦೮ರಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ ಪ್ರಕರಣದಲ್ಲಿ ಬೇಕಾಗಿರುವ, ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾನನ್ನು ಭಾರತಕ್ಕೆ ಒಪ್ಪಿಸಲು ಅಮೆರಿಕ ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿದೆ.
ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿತ್ತು, ಆದಕಾರಣ ಅಮೆರಿಕ ಆತನನ್ನು ಕಳೆದ ವರ್ಷ ಜೂನ್ ೧೦ರಂದು ಬಂಧಿಸಿತ್ತು.
ತಹವ್ವುರ್ ರಾಣಾ ೨೦೦೮ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಅತ್ಯಂತ ಕ್ರೂರವಾಗಿ ದಾಳಿ ಮಾಡಿದ್ದ ೧೦ ಮಂದಿ ಪಾಕಿಸ್ತಾನಿ ಭಯೋತ್ಪಾದಕರು, ಆರು ಮಂದಿ ಅಮೆರಿಕನ್ನರು ಸೇರಿ ಸುಮಾರು ೧೬೦ ಮಂದಿಯನ್ನು ದಾರುಣವಾಗಿ ಹತ್ಯೆ ಮಾಡಿದ್ದರು.
ಭಾರತ ಸಲ್ಲಿಸಿರುವ ಮನವಿ ಪುರಸ್ಕರಿಸಿರುವ ಯುಎಸ್ ಕೋರ್ಟ್ ಎಲ್ಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಆರೋಪಿಯ ವಿರುದ್ಧ ಪ್ರಸ್ತುತಪಡಿಸಿರುವ ವಾದಗಳನ್ನು ಪರಿಗಣಿಸಲಾಗಿದೆ ಎಂದು ನ್ಯಾಯಾಧೀಶ ಜಾಕ್ವೆಲಿನ್ ಚೂಲ್ಜಿಯಾನ್ ಹೇಳಿದರು.
ರಾಜತಾಂತ್ರಿಕ ಮಾರ್ಗಗಳ ಮೂಲಕ ಅವರನ್ನು ಭಾರತಕ್ಕೆ ಕರೆತರಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಿದ್ಧ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.
ಏನಿದು ಘಟನೆ:೨೦೦೮ ರ ನವೆಂಬರ್ ೨೬ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಆಗಮಿಸಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕರು ಸಂಘಟಿತ ಗುಂಡಿನ ದಾಳಿ ನಡೆಸಿದ್ದರು. ೩೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡು ೧೬೬ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.
ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್‌ಟಿ) ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಟವರ್ ಮತ್ತು ಒಬೆರಾಯ್-ಟ್ರೈಡೆಂಟ್ ಹೋಟೆಲ್‌ಗಳಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.