ಕೆನಡಾದ ಗಾಂಧಿ ಪ್ರತಿಮೆ ಧ್ವಂಸ

ಒಟ್ಟಾವಾ, ಜು. ೧೪- ಕೆನಡಾದ ಒಂಟಾರಿಯೊದ ರಿಚ್ಮಂಡ್ ಹಿಲ್ ನಗರದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಬಗ್ಗೆ ವಿಧ್ವಂಸಕ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರದೇಶದಲ್ಲಿನ ವಿಷ್ಣು ಮಂದಿರದಲ್ಲಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಕೆನಡಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಸಿಬಿಸಿ) ಯಾರ್ಕ್ ಪ್ರಾದೇಶಿಕ ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ.
ರಿಚ್‌ಮಂಡ್ ಹಿಲ್‌ನಲ್ಲಿರುವ ವಿಷ್ಣು ದೇವಸ್ಥಾನದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ನಮಗೆ ದುಃಖ ತಂದಿದೆ. ಈ ಕ್ರಿಮಿನಲ್, ದ್ವೇಷಪೂರಿತ ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದೆ. ಈ ದ್ವೇಷದ ಅಪರಾಧದ ತನಿಖೆಗಾಗಿ ಕೆನಡಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಟ್ವೀಟ್ ಮಾಡಿದ್ದಾರೆ.
ಭಾರತೀಯ ಸಮುದಾಯವನ್ನು ಭಯಭೀತಗೊಳಿಸುವ ಈ ದ್ವೇಷದ ಅಪರಾಧದಿಂದ ಭಾರತವು ತೀವ್ರವಾಗಿ ನೊಂದಿದೆ ಎಂದು ಒಟ್ಟಾವಾದಲ್ಲಿನ ಹೈಕಮಿಷನ್ ಹೇಳಿದೆ. ತನಿಖೆ ನಡೆಸಲು ಮತ್ತು ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಾಂಗಕ್ಕೆ ಒಪ್ಪಿಸುವಂತೆ ಭಾರತವು ಕೆನಡಾ ಸರ್ಕಾರವನ್ನು ಆಗ್ರಹಿಸಿದೆ.