ದೆಹಲಿ, ಸೆ.೨೨- ಈಗಾಗಲೇ ಖಲಿಸ್ತಾನಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಕೆನಡಾ ಸರ್ಕಾರ ಜೊತೆಗಿನ ರಾಜತಾಂತ್ರಿಕ ಸಂಬಂಧದಲ್ಲಿ ಮತ್ತೊಂದು ತಿರುವು ಲಭಿಸಿದೆ. ಇದೀಗ ಭಾರತವು ಕೆನಡಾ ಪ್ರಜೆಗಳಿಗೆ ನೀಡುತ್ತಿದ್ದ ವೀಸಾ ಸೇವೆಯನ್ನು ಗುರುವಾರದಿಂದ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಿದ್ದು, ಈ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದೆ. ಭಾರತ ಸರ್ಕಾರದ ಹೊಸ ಎದಿರೇಟಿನಿಂದ ಕೆನಡಾ ಸಹಜವಾಗಿಯೇ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಗಂಭೀರ ಆರೋಪ ಹೊರಿಸಿದ್ದ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅಲ್ಲದೆ ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಸಿಬ್ಬಂದಿಯನ್ನು ಕೂಡ ವಜಾಗೊಳಿಸಿತ್ತು. ಇದಕ್ಕೆ ತಿರುಗೇಟು ಎಂಬಂತೆ ಭಾರತ ಕೂಡ ಕೆನಡಾದ ಉನ್ನತ ಮಟ್ಟದ ಅಧಿಕಾರಿಯನ್ನು ದೇಶ ಬಿಟ್ಟು ತೆರಳುವಂತೆ ಸೂಚಿಸಿದೆ. ಸದ್ಯ ಮತ್ತೊಂದು ಕಠಿಣ ಕ್ರಮ ತೆಗೆದುಕೊಂಡಿರುವ ಭಾರತ, ಇದೀಗ ಕೆನಡಾ ಪ್ರಜೆಗಳಿಗೆ ನೀಡುತ್ತಿದ್ದ ವೀಸಾ ಸೇವೆಯನ್ನು ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಿದೆ. ಸಹಜವಾಗಿಯೇ ಇದರಿಂದ ಕೆನಡಾ ಪ್ರಜೆಗಳು ಭಾರತಕ್ಕೆ ಆಗಮಿಸುವಲ್ಲಿ ಮತ್ತಷ್ಟು ಕಠಿಣತೆ ಎದುರಾಗಿದೆ. ಒಂದು ವೇಳೆ ಕೆನಡಾ ಕೂಡ ಇದೇ ರೀತಿಯ ಕ್ರಮ ತೆಗೆದುಕೊಂಡರೆ ಅದು ಸಹಜವಾಗಿಯೇ ಆ ದೇಶದ ಮೇಲಿನ ಆರ್ಥಿಕತೆಗೆ ತೊಡಕುಂಟು ಮಾಡಲಿದೆ. ಭಾರತೀಯ ಮೂಲದ ವಿದ್ಯಾರ್ಥಿಗಳಿಂದಲೇ ಕೆನಡಾ ಸರ್ಕಾರವು ಬಿಲಿಯನ್ ಡಾಲರ್ ಮೌಲ್ಯದ ಆದಾಯ ಗಳಿಸುತ್ತಿದ್ದು, ಹಾಗಾಗಿ ಭಾರತಕ್ಕೆ ವೀಸಾ ಸ್ಥಗಿತಗೊಳಿಸಿದರೆ ಅದು ಆ ದೇಶಕ್ಕೆ ಹೆಚ್ಚಿನ ಹಾನಿ ಮಾಡಲಿದೆ. ಇದರ ನಡುವೆ ದೆಹಲಿಯಲ್ಲಿರುವ ಕೆನಡಾದ ರಾಜತಾಂತ್ರಿಕ ಅಧಿಕಾರಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಭಾರತ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಪ್ರವಾಸಿಗರಿಗೆ ಸಂಕಷ್ಟ!
ಒಂದರ್ಥದಲ್ಲಿ ಉತ್ತಮ ರೀತಿಯಲ್ಲಿ ಇದ್ದ ಭಾರತ-ಕೆನಡಾ ನಡುವಿನ ಸಂಬಂಧವು ಟ್ರುಡೊ ಅವರ ಬೇಜವಾಬ್ದಾರಿ ಹೇಳಿಕೆಯಿಂದ ಹಳಸಿದೆ ಎಂದರೆ ತಪ್ಪಾಗಲಾರದು. ಸದ್ಯ ಭಾರತವು ಕೆನಡಾ ಪ್ರಜೆಗಳಿಗೆ ನೀಡುತ್ತಿದ್ದ ವೀಸಾ ಸೇವೆಯನ್ನು ಸ್ಥಗಿತಗೊಳಿಸಿರುವುದು ಭಾರತಕ್ಕೆ ಆಗಮಿಸಲು ಸಿದ್ಧತೆ ನಡೆಸಿರುವ ಕೆನಡಾ ಪ್ರಜೆಗಳಿಗೆ ಸಂಕಷ್ಟ ತಂದಿದೆ. ಈಗಾಗಲೇ ಭಾರತೀಯ ವೀಸಾ ಹೊಂದಿರುವ ಪ್ರವಾಸಿಗರಿಗೆ ಯಾವುದೇ ಸಂಕಷ್ಟ ಇರದಿದ್ದರೂ ಭಾರತ ಭೇಟಿಗೆ ಯೋಜನೆ ಹಾಕಿಕೊಂಡಿರುವವರಿಗೆ ಮಾತ್ರ ಇದರ ಬಿಸಿ ತಟ್ಟಲಿದೆ. ಭಾರತಕ್ಕೆ ಭೇಟಿ ನೀಡುವ ಅಗ್ರ ಐದು ದೇಶಗಳ ಪೈಕಿ ಕೆನಡಾ ಸ್ಥಾನ ಪಡೆದುಕೊಂಡಿದ್ದು, ೨೦೨೧ರಲ್ಲಿ ಸುಮಾರು ೮೦ ಸಾವಿರ ಕೆನಡಿಯನ್ನರು ಭಾರತಕ್ಕೆ ಆಗಮಿಸಿದ್ದಾರೆ. ಅದೂ ಅಲ್ಲದೆ ೧೦ ಲಕ್ಷಕ್ಕೂ ಅಧಿಕ ಭಾರತೀಯ ಮೂಲದ ನಾಗರಿಕರು ಕೆನಡಾದಲ್ಲಿದ್ದು, ಅವರು ತಮ್ಮ ಭವಿಷ್ಯದ ಬಗ್ಗೆ ಕೂಡ ಹೆಚ್ಚು ತಲೆಗೆಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಟ್ರುಡು ಅವರ ಅಸಂಬದ್ಧ ಹೇಳಿಕೆಯಿಂದ ಎರಡೂ ರಾಷ್ಟ್ರಗಳ ನಾಗರಿಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.