ಕೆಡಿಗಳು ಚಲನಚಿತ್ರ ಚಿತ್ರೀಕರಣಕ್ಕೆ ಚಾಲನೆ: ಏಪ್ರಿಲ್, ಮೇನಲ್ಲಿ ತೆರೆಗೆ

ಕಲಬುರಗಿ:ಡಿ.11:ಜಿಲ್ಲೆಯ ಕಲಾವಿದರನ್ನು ಒಳಗೊಂಡ, ಸಾಹಿತ್ಯ ರಚನೆ, ಸಂಗೀತವೆಲ್ಲವೂ ಸ್ಥಳೀಯರಿಂದಲೇ ರಚನೆಗೊಂಡಿದ್ದು, ಸ್ಥಳೀಯ ಕಲಾವಿದರನ್ನೂ ಒಳಗೊಂಡ ಕೆಡಿ ಕನ್ನಡ ಚಲನಚಿತ್ರದ ಚಿತ್ರೀಕರಣವನ್ನು ನಗರದ ಜೆ.ಆರ್. ನಗರದ ವೀರಭದ್ರೇಶ್ವರ್ ದೇವಸ್ಥಾನದಲ್ಲಿ ಸೋಮವಾರ ಮುಹೋರ್ತ ನೆರವೇರಿಸಲಾಯಿತು ಎಂದು ನಟ ಪ್ರಶಾಂತ್ ನೂಲಕರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಕಡಿಮೆ ಬಜೆಟ್‍ನಲ್ಲಿ ಸ್ಥಳೀಯ ಕಲಾವಿದರು, ಸಂಗೀತಗಾರರು, ಸಾಹಿತಿಗಳು ಸೇರಿದಂತೆ ಚಲನಚಿತ್ರಕ್ಕೆ ಬೇಕಾಗುವ ಎಲ್ಲ ಅಗತ್ಯವಿರುವವರಿಗೆ ಜಿಲ್ಲೆಯವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದ್ದು, ಶಹಾಪುರದ ಎರಡು ಗ್ರಾಮಗಳಲ್ಲಿ ಇಡೀ ಚಲನಚಿತ್ರದ ಚಿತ್ರೀಕರಣ ಮಾಡಲಾಗುವುದು ಎಂದರು.
ಕೆಡಿಗಳು ಎಂದರೆ ಕುಚುಕು ದೋಸ್ತಿಗಳು ಎಂದರ್ಥ. ಚಿತ್ರಕಥಾ ವಸ್ತುವು ನಾಲ್ಕು ಪ್ರೇಮ ಕಥೆಗಳ ಹಂದರವಿದೆ. ಚಿತ್ರೀಕರಣವು ಕಲಬುರ್ಗಿ, ಬೆಂಗಳೂರು, ಹುಮ್ನಾಬಾದ್ ಮತ್ತು ಶಹಾಪುರ ಸೇರಿದಂತೆ ನಾಲ್ಕು ಸ್ಥಗಳಲ್ಲಿ ಒಟ್ಟು ಮೂರು ಹಂತಗಳಲ್ಲಿ ನೆರವೇರಿಸಲಾಗುತ್ತದೆ. ಬೆಂಗಳೂರಿನಲ್ಲಿ ನಮ್ಮ ಕಲಬುರ್ಗಿಯವರಿಗೆ ಚಿತ್ರೀಕರಣಕ್ಕೆ ಅವಕಾಶ ಕೊಡುವುದು ಕಷ್ಟ ಎಂಬುದನ್ನು ಅರಿತು ನಮ್ಮ ಭಾಗದ ಗ್ರಾಮಗಳನ್ನೇ ನಾವು ಆಯ್ದುಕೊಂಡಿದ್ದೇವೆ. ಸುಮಾರು 50ರಿಂದ 60 ಲಕ್ಷ ರೂ.ಗಳಷ್ಟು ಬಜೆಟ್‍ನಲ್ಲಿ ಚಲನಚಿತ್ರವನ್ನು ತಯಾರಿಸುತ್ತೇವೆ ಎಂದು ಅವರು ಹೇಳಿದರು.
ಕಲಾವಿದರೂ ಸಹ ಈ ಭಾಗದವರೇ ಆಗಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಪ್ರಶಾಂತ್ ನೂಲಕರ್, ತೇಜಸ್, ಸಂಗಮೇಶ್, ಶರಣಬಸು, ಅನ್ವಿ, ಪ್ರಿಯಾ ಮತ್ತು ಸ್ನೇಹಾ ಅವರು ನಟಿಸಿದ್ದಾರೆ. ಚಲನಚಿತ್ರವು 2024ರ ಏಪ್ರಿಲ್, ಮೇನಲ್ಲಿ ತೆರೆಗೆ ಬರಲಿದೆ ಎಂದು ಅವರು ಹೇಳಿದರು.
ಚಲನಚಿತ್ರದಲ್ಲಿ 8 ಹಾಡುಗಳಿವೆ. ನಾಲ್ಕು ಪ್ರೇಮ ಕಥನಗಳಿದ್ದು, ಇದು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ಸದಬಿರುಚಿಯ ಚಲನಚಿತ್ರವಾಗಿದೆ. ಕೆಲ ಯುವ ನಟರು ಈಗಾಗಲೇ ಚಲನಚಿತ್ರದಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ. ಈ ಭಾಗದಲ್ಲಿನ ಚಲನಚಿತ್ರಕ್ಕೆ ಬೇಕಾದ ಎಲ್ಲ ಕಲಾವಿದರನ್ನು ಗುರುತಿಸಿ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಾಗಿದೆ. ನಾವು ಬೇರೆ ಕಡೆಗೆ ಚಲನಚಿತ್ರದ ಚಿತ್ರೀಕರಣ ಮಾಡಬೇಕಿದ್ದರೆ ಸಾಕಷ್ಟು ಖರ್ಚು ಆಗುತ್ತಿತ್ತು. ಆದಾಗ್ಯೂ, ಇದು ಕೇವಲ ಎರಡು ಗ್ರಾಮಗಳಲ್ಲಿ ಆಗಿರುವ ಕಥೆ ಹಂದರ ಆಗಿರುವುದರಿಂದ ಆ ಎರಡು ಗ್ರಾಮಗಳಲ್ಲಿಯೇ ಇಡೀ ಚಿತ್ರದ ಚಿತ್ರೀಕರಣ ಆಗಲಿದ್ದು, ಇದರಿಂದ ಬಜೆಟ್ ಸಾಕಷ್ಟು ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು.
ಚಲನಚಿತ್ರವನ್ನು 2024ರ ಏಪ್ರಿಲ್, ಮೇನಲ್ಲಿ ಬಿಡುಗಡೆ ಮಾಡಲಾಗುವುದು. ರಾಜ್ಯಾದ್ಯಂತ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ತೇಜಸ್, ಸಂಗಮೇಶ್, ಶರಣಬಸು, ಪ್ರಿಯಾ, ಸ್ನೇಹಾ ಹಾಗೂ ಸಾಯಬಣ್ಣ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.