ಕೆಡದ ಬುತ್ತಿ ಕಟ್ಟಿಕೊಟ್ಟವರು ಶರಣರು

ಬಳ್ಳಾರಿ, ಡಿ.22: “ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಬಹಳ ಕಾಲ ಇರಲಾರದು” ಎಂಬುದು ಮಾತು ಮತ್ತು ಆಹಾರದ ಅಸ್ವಿತ್ವದ ಅಲ್ಪ ಕಾಲವನ್ನು ಸೂಚಿಸುತ್ತದೆ. ಆದರೆ ಶರಣರು ಕಟ್ಟಿಕೊಟ್ಟ ಬುತ್ತಿ ಎಂದಿಗೂ ಕೆಡಲಾರದ್ದು. ಮಾತ್ರವಲ್ಲದೇ ಅಂದಂದಿಗೆ ತನ್ನ ರುಚಿಯನ್ನು ದ್ವಿಗುಣಗೊಳಿಸಿಕೊಂಡಿರುತ್ತದೆ. ಆ ಬುತ್ತಿಯೇ ವಚನಗಳು ಎಂದು ವೀರಶೈವ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎಎಂಪಿ ವೀರಯ್ಯಸ್ವಾಮಿ ನುಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಗುಗ್ಗರಹಟ್ಟಿಯ ಶ್ರೀ ರಾಮಾಂಜಿನೇಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ 245ನೇ ಮಹಾಮನೆ ಲಿಂಗೈಕ್ಯ ಬಸಯ್ಯ ವೀರಭದ್ರಯ್ಯ ಹೊಸೂರುಮಠ, ಲಿಂಗೈಕ್ಯ ಕೊಟ್ರಯ್ಯ ವೀರಭದ್ರಯ್ಯ ಹೊಸೂರುಮಠ ದತ್ತಿ ಕಾರ್ಯಕ್ರಮದಲ್ಲಿ “ಬದುಕಿಗೆ ಬುತ್ತಿ ಶರಣರ ವಚನಗಳು” ಎಂಬ ವಿಷಯದ ಬಗ್ಗೆ ಮಾತನಾಡುತ್ತಾ, ಶರಣರ ವಚನಗಳು ಬೋಧನೆಯ ನೀತಿ ಮಾತುಗಳಲ್ಲ, ಅವು ಜೀವನ ಸಾಧನೆಯ ಫಲಗಳಾಗಿವೆ. ಅವುಗಳಲ್ಲಿ ಸರ್ವ ಕಾಲಕ್ಕೂ ಸಲ್ಲುವ ಅನುಭವದ ಅಮೃತ ಬೆರೆತಿದೆ. ಹೀಗಾಗಿ ಅವು ನೆತ್ತಿಯ, ಬದುಕಿನ ಬುತ್ತಿಯಾಗಿವೆ. ಈ ಬುತ್ತಿ ಎಂದಿಗೂ ಕೆಡದು, ಇದನ್ನು ಸ್ವೀಕರಿಸಿದವರ ಹಸಿವು ನೀಗುತ್ತದೆ. ಜೊತೆಗೆ ಬದುಕು ಆರೋಗ್ಯಪೂರ್ಣವಾಗಿರುತ್ತದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಉಪನ್ಯಾಸ ಎಸ್.ಪಿ.ಹೊಂಬಳ, ತಿನ್ನುವ ಆಹಾರ ಕೇವಲ ಹಸಿವು ನೀಗಲು ಮಾತ್ರವಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳಲು. ಅತಿ ತಿನ್ನುವುದಕ್ಕಿಂತ ಮಿತವಾಗಿ ತಿಂದು ಬದುಕಬೇಕು. ವಚನಗಳು ಶಾಶ್ವತ ಬದುಕಿಗೆ ಬೇಕಾದ ಪೌಷ್ಠಿಕಾಂಶಗಳನ್ನು ಹೊಂದಿವೆ ಎಂದರು. ವೀರಾಂಜನೇಯ ಭಕ್ತ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಅಂಜಿನಮ್ಮ ಭಕ್ತಿ ಸೇವೆ ಕೈಗೊಂಡು ಅಧ್ಯಕ್ಷತೆ ವಹಿಸಿದ್ದರು. ಕಡುಬಡತನದಲ್ಲಿ ಕಾಯಿಪಲ್ಯೆ ಮಾರಿ ಬದುಕುತ್ತಿದ್ದ ನನ್ನ ಬದುಕಿನಲ್ಲಿ ಬೆಳಕು ಮೂಡಿದ್ದು, ಶರಣರ ವಚನಗಳನ್ನು ಕೇಳುತ್ತಾ ಬಂದಿದ್ದರಿಂದ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ಧಾತೃಗಳನ್ನು ಪರಿಚಯಿಸಿದರು. ಕುಮಾರಿಯರಾದ ಪಲ್ಲವಿ ಮತ್ತು ಅರುಣ ವಚನ ಪ್ರಾರ್ಥನೆ ಮಾಡಿದರು. ಶ್ರೀಮತಿ ಶಾಂತಮ್ಮ ಸ್ವಾಗತ ಕೋರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಭೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ, ನಿವೃತ್ತ ಸೈನಿಕ ಕೆ.ತಿಪ್ಪೇಶ್, ಉಮಾದೇವಿ, ಶಾಂತಕುಮಾರಿ ಹಾಗೂ ವೀರಾಂಜನೇಯ ಭಕ್ತಮಂಡಳಿ ಸದಸ್ಯರು ಮಕ್ಕಳು ಉಪಸ್ಥಿತರಿದ್ದರು.