ಕೆಡಕಿನಿಂದ ರಕ್ಷಣೆ ನೀಡುವ ನಾಗ ಪಂಚಮಿ ಹಬ್ಬ

ಕಲಬುರಗಿ:ಆ.1:ಶ್ರಾವಣ ಮಾಸ ಪ್ರಾರಂಭವಾಯಿತೆಂದರೆ ಸಾಲು ಸಾಲು ಹಬ್ಬಗಳು ಪ್ರಾರಂಭ. ಇಂತಹ ಹಬ್ಬಗಳಲ್ಲಿ ಪ್ರಥಮ ಹಬ್ಬ ನಾಗ ಪಂಚಮಿಯು. ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಅತ್ಯಂತ ಮಹತ್ವದ ಹಬ್ಬವಾಗಿದೆ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯೆಂದು ಈ ಹಬ್ಬ ಆಚರಣೆ ಮಾಡುತ್ತಾರೆ. ಈ ದಿನದಂದು ನಾಗದೇವತೆಯನ್ನು ಪೂಜಿಸಲಾಗುತ್ತದೆ. ಹುತ್ತಗಳಿಗೆ ಹಾಲು ಎರೆಯುವ ಮೂಲಕ ಎಲ್ಲ ಕೆಡುಕಗಳಿಂದ ರಕ್ಷಣೆ ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ನಾಗರ ಪಂಚಮಿಯ ಆಚರಣೆ ಪುರಾಣ ಕಾಲದಿಂದ ಕುರಿತು ವಿವಿಧ ಕಥೆಗಳಿವೆ.

ಪುರಾಣಗಳಲ್ಲಿ ನಾಗರ ಪಂಚಮಿ : ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ಮಹಾರಾಜನ ಸಾವಿಗೆ ಸರ್ಪ ರಾಜ ಎಂದು ತಿಳಿದು ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ” ಸರ್ಪ ಯಜ್ಞನವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬೂದಿಯಾಗತೊಡಗಿತು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ. ಆಸ್ತಿಕ ಋಷಿಯ ಸರ್ಪ ಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾ ಪಾಪ. ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋದಿಸಿದ. ಜನಮೇಜಯ ರಾಜ ಆಸ್ತಿಕನ ಮಾತಿಗೆ ಬೆಲೆ ಕೊಟ್ಟು ಸರ್ಪಯಜ್ಞನವ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.

ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಶ್ರೀ ಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಆತನ ಒಂದು ಕಥೆ ಹೇಳುತ್ತಾನೆ. ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದು ಆತನಿಗೆ 8 ಗಂಡು ಮಕ್ಕಳು ಹಾಗು ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೆ ಎಂದು ಆ ಕನ್ನಿಕೆ. ದೇವರ ಎದುರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಏಳು ಜನರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನ: ಅಣ್ಣಂದಿರ ಜೀವವನ್ನು ಮರಳಿ ಪಡೆದು ಕೊಳ್ಳುವಿಕೆಯಲ್ಲಿ ಆ ಸಹೋದರಿ ಯಶಸ್ವಿಯಾದ ದಿನವೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ.

ದೇವತೆಗಳು ಸಹ ನಾಗಗಳಿಗೆ ವಿಶಿಷ್ಟ ಸ್ಥಾನಮಾನ ನೀಡಿದ್ದಾರೆ. ಮುಖ್ಯವಾಗಿ ಶಿವನ ಆಭರಣ, ವಿಷ್ಞುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರ ಮಂಥನ ಕಾಲದಲ್ಲಿ ಮಂದರ ಪರ್ವತರೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗಗಳು ಕಾಣ ಸಿಗುತ್ತವೆ. ನಾಗಗಳಿಗೆ ದೇವತೆ ಸ್ಥಾನವನ್ನು ನೀಡಲಾಗಿದೆ ಪ್ರಸ್ತುತ ಈಗಲು ಮುಖ್ಯವಾಗಿ ಚರ್ಮವ್ಯಾದಿ, ಕರ್ಮದೋಷ, ಸಂತಾನಕ್ಕೆ, ಇತರೆ ಜಾತಕ ದೋಷಗಳಿಗೆ ನಾಗ ದೇವತೆಗಳಾದ ಕುಕ್ಕೆ ಸುಬ್ರಮಣ್ಯ, ಘಾಟಿ ಸುಬ್ರಮಣ್ಯ, ಸ್ಥಳಗಳಿಗೆ ಭೇಟಿ ನೀಡಿ ಪೂಜೆ ಮಾಡುವ ಪದ್ಧತಿ ಇದೆ.

“ಅನಂತಂ ವಾಸುಕೀಂ ಶೇಷಂ ಪದ್ಮನಾಭಂ ಚ ಕಂಬಲಮ್ | ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂ ಶ್ಲೋಕವು ನಾಗ ದೇವತೆ ವಿವಿಧ ಹೆಸರುಗಳನ್ನು ತಿಳಿಸುತ್ತವೆ. ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗದೇವತೆಗಳ ಆರಾಧನೆ ಮಾಡಲಾಗುತ್ತದೆ.

ನಾಗ ಪಂಚಮಿ ಮುಖ್ಯವಾಗಿ ಇದು ಹೆಣ್ಣು ಮಕ್ಕಳ ಹಬ್ಬ. ಅಂದು ವಾತಾವರಣ ಸ್ಥಿರವಾಗಿತ್ತದೆ. ಸಾತ್ವಿಕತೆಯ ಗ್ರಹಿಸಲು ಈ ಮಾಸ ಅತ್ಯಂತ ಯೋಗ್ಯ ಮತ್ತು ಉಪಯುಕ್ತವಾಗಿದೆ. ಆ ದಿನದಂದು ಮನೆಯ ಬಾಗಿಲು ಮುಂದೆ ಗೋಮಯ (ಸಗಣಿ)ಯಿಂದ ಸಾರಿಸಿ ಬಣ್ಣ ಬಣ್ಣಗಳ ರಂಗೋಲಿ ಹಾಕಲಾಗುತ್ತದೆ. ಅರಿಶೀಣ, ಕುಂಕುಮದಿಂದ ನಾಗರ ಚಿತ್ರಗಳನ್ನು ಬರೆಯುತ್ತಾರೆ. ನಾಗರ ಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ಈ ಮಾಂಗಲ್ಯ ಪ್ರಧಾನ ಮತ್ತು ಸಂತಾನ ಪ್ರಧಾನ ಹಬ್ಬವಾಗಿದೆ. ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ವಿಜೃಂಭಣೆಯಾಗಿ ಚತುರ್ಥಿ ಮನೆಯಲ್ಲಿ ಬೆಳ್ಳಿ ನಾಗಪ್ಪನಿಗೆ ಹಾಲು ಎರೆಯುತ್ತಾರೆ. ಪಂಚಮಿ ದಿನ ಹುತ್ತಿಗೆ ಹೋಗಿ ಎಳ್ಳಿನ ಉಂಡಿ, ಶೇಂಗಾ ಉಂಡಿ, ಬೇಸನ ಉಂಡೆ , ಜೋಳದ (ಅಳ್ಳಿನ) ನೈವೆದ್ಯ ಇಡುತ್ತಾರೆ. ಈ ಹಬ್ಬದಂದು ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಉಡುಗರೆ ನೀಡಿ ಗೌರವಿಸಲಾಗುತ್ತದೆ.

ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯ ಶಕ್ತಿಯಾಗಿದ್ದಾನೆ. ನಮ್ಮ ದೇಹವು ಸಹ ಏಳು ಸುತ್ತುಗಳು ಸರ್ಪದಂತೆ 7ಚಕ್ರಗಳ ಮಧ್ಯೆ ಹಾದು ಹೋಗಿದೆ. ಜಗತ್ತಿನಲ್ಲಿ ಎಲ್ಲ ಜೀವ ಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ.ಜಗತ್ತಿನಲ್ಲಿ ಎಲ್ಲರೂ ಸುಖ ಸಮೃದ್ಧಿಯಿಂದ ಬಾಳ್ವೆ ಮಾಡಲಿ ಎಂಬುದು ಈ ಹಬ್ಬದ ಸಂಕೇತವಾಗಿದೆ. ಎಲ್ಲ ಜೀವ ಜಂತುಗಳ ರಕ್ಷಣೆಯೊಂದಿಗೆ ಎಲ್ಲರು ಸುಖ ಬಾಳ್ವೆಯಿಂದ ಬಾಳಲಿ ಎಂಬುದು ಹಬ್ಬಳ ಆಚರಣೆಯಾಗಿದೆ.

ಡಾ.ರಾಜು ಕಂಬಾಳಿಮಠ

ಕಲಬುರಗಿ