ಕೆಟ್ಟ ಸಂಸ್ಕೃತಿಗೆ ಕೈ ಮಹಾದ್ವಾರ

ಹುಬ್ಬಳ್ಳಿ,ಜ.೧೨:ಕೆಟ್ಟ ಸಂಸ್ಕೃತಿ ರಾಜಕಾರಣ ಪ್ರವೇಶಿಸಲು ಕಾಂಗ್ರೆಸ್ಸೇ ಮಹಾದ್ವಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎಲ್ಲ ಕೆಟ್ಟ ಸಂಸ್ಕೃತಿಗಳು ಪ್ರವೇಶದ್ವಾರ ಕಾಂಗ್ರೆಸ್,ಕಾಂಗ್ರೆಸ್‌ನಲ್ಲಿ ಎಂತೆಂತವರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಕಾಂಗ್ರೆಸ್ ನಾಯಕರು ರಾಜಕೀಯವಾಗಿ ದಿವಾಳಿಯಾಗಿದ್ದಾರೆ. ಹಾಗಾಗಿ ಏನೇನೋ ಮಾತನಾಡುತ್ತಾರೆ. ಮಾಜಿ ಸಚಿವ ದಿನೇಶ್ ಗುಂಡೂರಾವ್, ಸ್ಯಾಂಟ್ರೊ ರವಿ ವಿಚಾರದಲ್ಲಿ ಟ್ವೀಟ್ ಮಾಡಿರುವುದನ್ನು ಗಮನಿಸಿದ್ದೇನೆ. ನಾನು ದಿನೇಶ್ ಗುಂಡೂರಾವ್ ಅವರ ಮಟ್ಟಕ್ಕೆ ಇಳಿಯುವುದಿಲ್ಲ. ರಾಜಕಾರಣದಲ್ಲಿ ಕೆಟ್ಟ ಸಂಸ್ಕೃತಿ ಮಹಾದ್ವಾರ ಕಾಂಗ್ರೆಸ್ ಎಂದು ಹರಿಹಾಯ್ದರು.
ಸ್ಯಾಂಟ್ರಿ ರವಿ ಬಿಜೆಪಿ ಕಾರ್ಯಕರ್ತನೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಸೂಚನೆ ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರವಿದ್ದಾಗಲೇ ಸ್ಯಾಂಟ್ರೊ ರವಿ ಜೈಲಿನಿಂದ ಬಿಡುಗಡೆಯಾಗಿದ್ದ, ಕಾಂಗ್ರೆಸ್‌ನವರು ಮೊದಲು ತಮ್ಮ ಮನೆಯನ್ನು ಸ್ವಚ್ಛ ಮಾಡಿಕೊಳ್ಳುವುದನ್ನು ಕಲಿಯಲಿ ಎಂದರು.
ಸ್ಯಾಂಟ್ರೊ ರವಿ ಬಂಧನವಾಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿಕೆನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮುಂದೆ ಇವುಗಳನ್ನು ಅನುಷ್ಠಾನ ಮಾಡುವ ಉದ್ದೇಶವಿಲ್ಲ. ಹೇಗಾದರೂ ಮಾಡಿ ಸುಳ್ಳು ಭರವಸೆ ನೀಡಿ ಚುನಾವಣೆ ಗೆಲ್ಲಬೇಕೆನ್ನುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ಇಷ್ಟು ವರ್ಷ ಆಡಳಿತ ಮಾಡಿದ ಜವಾಬ್ದಾರಿಯುತ ಪಕ್ಷ ಕಾಂಗ್ರೆಸ್, ಈ ರೀತಿ ಮಾಡುವುದು ಸಲ್ಲದು, ಅರವಿಂದ ಕೇಜ್ರಿವಾಲ್ ಹೇಳಿದರೆ ನಡೆಯುತ್ತದೆ. ಅವರಿನ್ನು ಹೊಸಬರು ಎಂದ ಅವರು, ಕಾಂಗ್ರೆಸ್ ಆಡಳಿತದಲ್ಲಿ ೬ ತಾಸು ಸರಿಯಾಗಿ ವಿದ್ಯುತ್ ಕೊಡಲೇ ಆಗಲಿಲ್ಲ. ಇನ್ನು ಉಚಿತ ವಿದ್ಯುತ್ ಹೇಗೆ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.