ಕೆಟ್ಟು ನಿಂತ ಸಿಟಿಸ್ಕ್ಯಾನ್ ರಿಪೇರಿ ಮಾಡಿ, ಲ್ಯಾಬ್ ಸಮಸ್ಯೆ ಕೂಡಲೇ ಬಗೆಹರಿಸಿ: ಕಾಶೆಂಪುರ್

ಬೀದರ:ಮೇ.1: ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೇ ಸಿಟಿ ಸ್ಕ್ಯಾನ್ ಮಷೀನ್ ಕೆಟ್ಟುನಿಂತಿದೆ. ಲ್ಯಾಬ್ ಗಳ ಸಮಸ್ಯೆ ಇದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಕೂಡಲೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಆಗ್ರಹಿಸಿದ್ದಾರೆ.

ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಚಿವ ಡಾ. ಸುಧಾಕರ್ ರವರ ನೇತೃತ್ವದಲ್ಲಿ ನಡೆದ ಕೋವಿಡ್ – 19 ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಾ ಸಾಗುತ್ತಿದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕಾದ ಆಸ್ಪತ್ರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದರೆ ಹೇಗೆ..?
ಖಾಸಗಿ ಲ್ಯಾಬ್ ಗಳಿಗೆ, ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡ್ರೆ 06 ಸಾವಿರ ರೂ. ವರೆಗೂ ಸಿಟಿ ಸ್ಕ್ಯಾನ್ ಬಿಲ್ ಮಾಡ್ತಾರೆ. ಬಡಜನರಿಗೆ ಇದು ಸಾಧ್ಯವಾಗುತ್ತಾ..? ನಿಮ್ಮ ಆಸ್ಪತ್ರೆಯಲ್ಲಿ ಒಂದೇ ಸಿಟಿ ಸ್ಕ್ಯಾನ್ ಮಷೀನ್ ಇಟ್ಕೊಂಡು ಸಮಸ್ಯೆಯಾಗಿದೆ ಅಂದ್ರೆ ಹೇಗೆ..? ಕೂಡಲೇ ಅದನ್ನು ದುರಸ್ತಿ ಮಾಡಿಸಬೇಕು. ಜೊತೆಗೆ ಇನ್ನೊಂದು ಮಷೀನ್ ಖರೀದಿ ಮಾಡಬೇಕಿತ್ತಲ್ಲವಾ..? ಇದಕ್ಕೆ ಸಿಎಂ ಏನಾದ್ರು ಅಪ್ರೂವಲ್ ಮಾಡ್ಬೇಕಾ..? ನಾವೇನಾದ್ರು ಸಿಎಂರವರಿಗೆ ಪೋನ್ ಮಾಡಬೇಕಾ..? ಸಚಿವರ, ಶಾಸಕರ ಅನುಮತಿ ಬೇಕಾ..? ಇನ್ನೊಂದು ಮಷೀನ್ ಖರೀದಿ ಮಾಡಲು ಹಣ ಇಲ್ಲವೇ..? ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದೇ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಡಾ. ಸುಧಾಕರ್ ರವರು, ನಾಳೆಯಿಂದ ಸಿಟಿ ಸ್ಕ್ಯಾನ್ ಮಷೀನ್ ವರ್ಕ್ ಮಾಡ್ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಾಂತ್ರಿಕ ಸಮಸ್ಯೆಯಿಂದ ಸಿಟಿ ಸ್ಕ್ಯಾನ್ ಮಷೀನ್ ಕೆಲಸ ಮಾಡುತ್ತಿರಲಿಲ್ಲ. ದುರಸ್ತಿಗೆ ಕೊಟ್ಟಿದ್ದೇವೆ. ಇಂದು ಸಂಜೆಯೆ ದುರಸ್ತಿಯಾಗುತ್ತೆ. ಕೆಲಸ ಸ್ಟಾರ್ಟ್ ಮಾಡ್ತಿವಿ ಎಂದು ಅಧಿಕಾರಿಗಳು ಹೇಳಿದರು.

ಇನ್ನೂ ಇದೇ ವೇಳೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಬ್ರಿಮ್ಸ್ ನಲ್ಲಿ ಸೇವೆ ಸಲ್ಲಿಸುವ ಅಟೆಂಡರ್ ಗಳಿಗೆ ಪಿಪಿಇ ಕಿಟ್ ಕೊಡ್ತಿಲ್ಲ. ಇಂತಹ ಮಹಾಮಾರಿಯ ಜೊತೆಗೆ ಹೋರಾಡ್ತಿರುವ ಅವರಿಗೆ ಸರಿಯಾದ ವ್ಯವಸ್ಥೆಗಳು, ಮುನ್ನೆಚ್ಚರಿಕಾ ಕ್ರಮಗಳಿಲ್ಲ. ಆಸ್ಪತ್ರೆಯ ಸ್ವಚ್ಚತೆಯ ವಿಚಾರದಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದರು. ಈ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಶಾಸಕ ರಹೀಂಖಾನ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.