ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು

(ಸಂಜೆವಾಣಿ ವಾರ್ತೆ)
ನವಲಗುಂದ,ಆ 8: ಮನುಷ್ಯನಿಗೆ ಒಂದೊತ್ತಿನ ಊಟ ಇಲ್ಲವಾದ್ರು ಪರವಾಗಿಲ್ಲ. ಕುಡಿಯಲು ಶುದ್ದ ನೀರಿದ್ರೆ ಸಾಕೆಂಬ ಗಾದೆ ಮಾತೊಂದಿದೆ. ಆದ್ರೆ ನವಲಗುಂದ ತಾಲ್ಲೂಕಿನಲ್ಲಿ 37 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೆ, ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ಪುರಸಭೆಯಿಂದ 2 ಘಟಕಗಳನ್ನು ಹಾಗೂ ಬಸ್ ಡಿಪೆÇೀದಲ್ಲೊಂದು ಘಟಕ ಸ್ಥಾಪಿಸಿದೆ. ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಕೆಟ್ಟುಹೋಗಿರುವ ಘಟಕಗಳ ದುರಸ್ತಿ ನಡೆಯದೇ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗೆ ಪರದಾಡುವಂತಾಗಿದೆ.
ಪ್ರತಿದಿನ ಒಂದಿಲ್ಲೊಂದು ಘಟಕಗಳು ಕೆಟ್ಟು ನಿಲ್ಲುತ್ತವೆ. ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇವುಗಳನ್ನು ದುರಸ್ತಿ ಮಾಡಬೇಕಾಗಿರುವ ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯವೇ ಹೆಚ್ಚಾಗಿದೆ ಎನ್ನಬಹುದು.
ಶುದ್ಧ ಕುಡಿಯುವ ನೀರಿನ ನೆಪದಲ್ಲಿ ತಾಲ್ಲೂಕಿನಲ್ಲಿ ವಾಟರ್ ಕ್ಯಾನ್‍ಗಳ ಮಾರಾಟ ಜೋರಾಗಿದೆ.ಕೆಲವರು ಅದೇ ಕ್ಯಾನಗಳಲ್ಲಿ ಮಾರಾಟ ಮಾಡಿದರೆ ಇನ್ನೂ ಕೆಲವರು ಅದರಲ್ಲಿದ್ದ ಲೇಬಲ್ ತೆಗೆದು ತಮಗೆ ಬೇಕಾದ ಲೇಬಲ್ ಅಂಟಿಸಿ ಮದುವೆಯಂಥ ಕಾರ್ಯಕ್ರಮಗಳಿಗೆ ಪೂರೈಕೆ ಮಾಡುತ್ತಿರುವ ನಿದರ್ಶನಗಳು ಇವೆ.
ಆದರೆ ಶುದ್ಧ ನೀರಿನ ಘಟಕದ ನೀರನ್ನು ತುಂಬಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರ ಮೇಲೆ ಕ್ರಮ ಜರುಗಿಸುವ ಕೆಲಸ ಪಂಚಾಯತಗಳಿಂದ ಆಗಿಲ್ಲ.