ಕೆಟಿಎಸ್ ಬೆಂಬಲಿಗರ ಜತೆ ಸಾರಾ- ಪುಟ್ಟರಾಜು ಜಟಾಪಟಿ, ಬೆಂಬಲಿಸಿದ ಬಿಜೆಪಿ ಗೌಣ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.17:- ಜೆಡಿಎಸ್ ನ ಪ್ರಬಲ ಆಕಾಂಕ್ಷಿಯಾಗಿದ್ದ ಕೆ.ಟಿ.ಶ್ರೀಕಂಠೇಗೌಡರನ್ನು ಹೈಜಾಕ್ ಮಾಡಿದ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಸಾ.ರಾ.ಮಹೇಶ್ ಅವರ ನಡೆಗೆ ಬೆಂಬಲಿಗರು ಜಟಾಪಟಿ ನಡೆಸಿ ದೊಡ್ಡ ಗದ್ಧಲದ ನಡುವೆಯೇ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಬಿಜೆಪಿ ಮೈತ್ರಿಯಾದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಕ್ಷೇತ್ರ ಜೆಡಿಎಸ್ ಪಾಲಾಯಿತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆ.ಟಿ.ಶ್ರೀಕಂಠೇಗೌಡರಿಗೆ ಟಿಕೇಟ್ ತಪ್ಪಿದ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆ ಮಂಡ್ಯದಲ್ಲಿ ಪ್ರತ್ಯೇಕವಾಗಿ ಬೆಂಬಲಿಗರ ಸಭೆ ನಡೆಸಿದ್ದರು. ಇಂದು ಸಹ ಮೈಸೂರಿನ ಕುಂಚಿಟಗರ ಸಮುದಾಯಭವನ(ಆಲಮ್ಮನ ಛತ್ರ) ದಲ್ಲಿ ಬೆಂಬಲಿಗರ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲು ನಿಶ್ಚಯಿಸಿದ್ದರು. ಇದಕ್ಕೆ ಪೂರಕವಾಗಿ ಶತಾಯಗತಾಯ ಪಕ್ಷೇತರರಾಗಿಯಾದರೂ ಕೆಟಿಎಸ್ ಸ್ಪರ್ಧೆಗಿಳಿಯಬೇಕೆಂದು ಬೆಂಬಲಿಗರು ಒತ್ತಡ ಹೇರಲಾರಂಭಿಸಿದ್ದರು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಸಾ.ರಾ.ಮಹೇಶ್ ಇಬ್ಬರೂ ಸಭೆ ಮಧ್ಯೆದಲ್ಲೇ ಕೆ.ಟಿ.ಶ್ರೀಕಂಠೇಗೌಡರ ಮನವೊಲಿಸಿ ಕರೆದೊಯ್ಯುವ ಪ್ರಯತ್ನ ನಡೆಸಿದರು. ಈ ವೇಳೆ ಕೆಟಿಎಸ್ ಬೆಂಬಲಿಗರು ಯಾವುದೇ ಕಾರಣಕ್ಕೂ ಅವರು ಬರುವುದಿಲ್ಲ, ಅವರನ್ನು ನೀವೂ ಕರೆದೊಯ್ಯಬೇಡಿ ಎಂದು ಪಟ್ಟು ಹಿಡಿದರು. ಈ ವೇಳೆ ಕಾರ್ಯಕರ್ತರು ಹಾಗೂ ನಾಯಕರ ನಡುವೆ ದೊಡ್ಡ ಜಟಾಪಟಿಯೇ ನಡೆದು ಹೊಯಿತು.
ಕೆಟಿಎಸ್ ಗೆ ಪೆಟ್ಟು: ಸಾರಾ ಹಾಗೂ ಪುಟ್ಟರಾಜು ಮತ್ತು ಕಾರ್ಯಕರ್ತರ ನಡುವಿನ ಜಟಾಪಟಿಯಲ್ಲಿ ಕೆ.ಟಿ.ಶ್ರೀಕಂಠೇಗೌಡರ ಕೈಗೆ ಪೆಟ್ಟಾಯಿತು. ಈ ಹಿನ್ನೆಲೆಯಲ್ಲಿ ಸಾರಾ ಹಾಗೂ ಪುಟ್ಟರಾಜು ಕೊನೆಗೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಕೊನೆ ಕ್ಷಣದಲ್ಲಿಯಾದರೂ ಪಕ್ಷೇತರಾಗಿ ನಾಮಪತ್ರ ಸಲ್ಲಿಸುವರೆಂಬ ಕೆಟಿಎಸ್ ಬೆಂಬಲಿಗರಿಗೆ ನಿರಾಸೆಯಾಗಿದೆ. ಜತೆಗೆ ಕೆಟಿಎಸ್ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಮುಂದಿನ ರಾಜಕೀಯ ನಡೆ ಗೌಪ್ಯವಾಗಿದೆ ಎನ್ನಲಾಗಿದೆ.
ಎಚ್ ಡಿಕೆ ಮಾತಿಗೂ ಬಗ್ಗದ ಕೆಟಿಎಸ್: ರಾತ್ರಿಯಿಡೀ ಎಚ್ ಡಿಕೆ, ಸಾರಾ ಮಹೇಶ್, ಜಿ.ಟಿ.ದೇವೇಗೌಡರು ಸೇರಿ ಅನೇಕರು ಕೆ.ಟಿ.ಶ್ರೀಕಂಠೇಗೌಡರ ಮನವೊಲಿಸುವ ಪ್ರಯತ್ನ ನಡೆಸಿದ್ದರೆನ್ನಲಾಗಿದೆ. ಇದಾಗಿಯೂ ಬೆಂಬಲಿಗರ ಸಭೆ ಕರೆದ ಹಿನ್ನೆಲೆಯಲ್ಲಿ ಜಟಾಪಟಿ ಬೆಳವಣಿಗೆ ನಡೆದವು ಎನ್ನಲಾಗಿದೆ.