ಕೆಜಿಎಫ್ ನಲ್ಲಿ ವಿಶ್ವಯೋಗ ದಿನಾಚರಣೆ

ಕೆಜಿಎಫ್., ಜೂ. ೨೨- ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೆಜಿಎಫ್‌ನ ಡಿಎಆರ್ ಮೈದಾನದಲ್ಲಿ ಬುಧವಾರದಂದು ಬೆಳಿಗ್ಗೆ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಮಾಲಗತ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಯೋಗವು ವ್ಯಾಯಾಮದ ಒಂದು ಪರಿಣಾಮಕಾರಿ ರೂಪವಾಗಿದೆ, ಇದರ ಮೂಲಕ ದೇಹದ ಭಾಗಗಳಲ್ಲಿ ಮಾತ್ರವಲ್ಲದೆ ಮನಸ್ಸು, ಮೆದುಳು ಮತ್ತು ಆತ್ಮದಲ್ಲಿ ಸಮತೋಲನವನ್ನು ರಚಿಸಲಾಗುತ್ತದೆ, ಇದೇ ಕಾರಣಕ್ಕೆ ಯೋಗದಿಂದ ದೈಹಿಕ ಕಾಯಿಲೆಗಳಲ್ಲದೆ ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದೆಂದು ಅಭಿಪ್ರಾಯ ಪಟ್ಟರು.
ಯೋಗವು ಒಂದು ಅದ್ಬುತವಾದ ವ್ಯಾಯಾಮವಾಗಿದ್ದು, ದೇಹ ಮತ್ತು ಮನಸ್ಸು ಎರಡನ್ನೂ ನಿಯಂತ್ರಣದಲ್ಲಿಡುತ್ತದೆ. ಪೊಲೀಸರಿಗೆ ಇರುವಂತಹ ಒತ್ತಡವನ್ನು ತೊಡೆದುಹಾಕಲು ಯೋಗವು ಏಕೈಕ ಪರಿಹಾರವಾಗಿದೆ, ದಿನವಿಡೀ ಯೋಗಕ್ಕೆ ಕೇವಲ ೧೫ ನಿಮಿಷಗಳನ್ನು ಮೀಸಲಿಟ್ಟಲ್ಲಿ, ಅದು ದೇಹ ಮತ್ತು ಮನಸ್ಸಿಗೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ತಿಳಿಸಿದರು.
ಡಿವೈಎಸ್ಪಿ ವಿ.ಎಲ್.ರಮೇಶ್ ಅವರು ಮಾತನಾಡಿ, ಯೋಗವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುತ್ತದೆ ಮತ್ತು ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಬದುಕಿನಲ್ಲಿ ಉತ್ಸಾಹ ಹೆಚ್ಚುತ್ತದೆ, ನಮ್ಮ ದೇಹವು ಹೊಂದಿಕೊಳ್ಳುತ್ತದೆ. ಯಾವುದೇ ಕೆಲಸದಲ್ಲಿ ನಮಗೆ ಆಯಾಸವಾಗಲೀ ದು:ಖವಾಗಲೀ ಇರುವುದಿಲ್ಲವೆಂದು ನುಡಿದರು. ಪೊಲೀಸರು ಸಹ ಪ್ರತಿನಿತ್ಯ ಯೋಗವನ್ನು ಮಾಡುವುದನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಆರ್‌ಪಿಐ ವಿ.ಸೋಮಶೇಖರ್ ಅವರು ಯೋಗ ದಿನದ ಉಸ್ತುವಾರಿ ವಹಿಸಿದ್ದರು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ನಿಸ್ತಂತು ಪಿಎಸ್‌ಐ ನಾಗಪ್ಪ ಖಾನಾಪೂರ ಅವರು ಯೋಗ ಶಿಕ್ಷಣದ ತರಬೇತಿಯನ್ನು ನೀಡಿದರು,