ಕೆಜಿಎಫ್‌ನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ: ಶೆಟ್ಟರ್


ಬೆಂಗಳೂರು, ಮಾ. ೧೯- ಕೋಲಾರದ ಕೆಜಿಎಫ್‌ನಲ್ಲಿರುವ ಬಿಇಎಂಎಲ್ ಸಂಸ್ಥೆ ಬಳಕೆ ಮಾಡದ ಜಮೀನು ಮತ್ತು ಭಾರತ್ ಗೋಲ್ಡ್ ಮೈನಿಂಗ್ ಲಿ. (ಬಿಜಿಎಂಎಲ್) ಬಳಕೆ ಮಾಡದ ಜಮೀನನನ್ನು ವಾಪಸ್ ಪಡೆದು ಅಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್‌ಶೆಟ್ಟರ್ ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕ ಸ್ವಾಮ್ಯದ ಬಿಇಎಂಎಲ್ ಸಂಸ್ಥೆಗೆ ೧೯೫೪-೬೫ನೇ ಸಾಲಿನಲ್ಲಿ ಸರ್ಕಾರ ಕಾರ್ಖಾನೆ ಸ್ಥಾಪಿಸಲು ೧೮೪೯ ಎಕರೆ ಜಮೀನನ್ನು ಉಚಿತವಾಗಿ ನೀಡಿತ್ತು.
ಈ ಜಮೀನಿನ ಪೈಕಿ ಬಿಇಎಂಎಲ್ ೯೭೩ ಎಕರೆ ಜಮೀನ್ನನು ಬಳಕೆ ಮಾಡಿಲ್ಲ. ಈ ಬಳಕೆ ಮಾಡದ ಜಮೀನನ್ನು ಕಂದಾಯ ಇಲಾಖೆಗೆ ವಾಪಸ್ ಪಡೆಯಲಾಗಿದೆ.
ಕಂದಾಯ ಇಲಾಖೆಯಿಂದ ಈ ಜಮೀನನ್ನು ಕೆಐಎಡಿಬಿಗೆ ಪಡೆದು ಅಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಜಮೀನು ಹಸ್ತಾಂತರ ಪ್ರಕ್ರಿಯೆ ನಡೆದಿದೆ ಎಂದರು. ಅದೇ ರೀತಿ ಕೆಜಿಎಫ್‌ನಲ್ಲಿರು ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಜಿಎಂಎಲ್ ಕಂಪನಿಯ ಒಡೆತನದಲ್ಲಿರುವ ಸುಮಾರು ೩ ೨೧೨ ಎಕರೆ ಜಮೀನು ಚಿನ್ನದ ನಿಕ್ಷೇಪ ಪತ್ತೆ ಮಾಡಲು ಬಳಕೆಯಾಗಿಲ್ಲ.
ಈ ಜಮೀನನ್ನು ವಾಪಸ್ ಪಡೆ
ಯುವ ತೀರ್ಮಾನ ಮಾಡಿದ್ದೇವೆ. ಈ ಸಂಬಂಧ ಕೇಂದ್ರದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಷಿ ಜತೆ ಚರ್ಚೆ ನಡೆಸಿದ್ದೆವು. ಅವರು ಜಮೀನು ನೀಡಲು ಒಪ್ಪಿಗೆ ನೀಡಿದ್ದಾರೆ ಎಂದರು.
ಜಮೀನನ್ನು ವಾಪಸ್ ಪಡೆಯುವ ಮುನ್ನ ಬಳಕೆಯಾಗದ ಈ ಜಮೀನಿನಲ್ಲಿ ಚಿನ್ನದ ನಿಕ್ಷೇಪ ಇದೆಯೇ ಇಲ್ಲವೋ ಎಂಬ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಚಿನ್ನದ ನಿಕ್ಷೇಪ ಇಲ್ಲ ಎಂದರೆ ಈ ಜಮೀನನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟು ಕೊಡುವುದಾಗಿ ಕೇಂದ್ರ ಗಣಿ ಸಚಿವರು ಹೇಳಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಸರ್ವೆ ಕಾರ್ಯ ಮುಗಿಯಲಿದೆ. ಎಂದು ಅವರು ಹೇಳಿದರು. ಬಿಇಎಂಎಲ್ ಮತ್ತು ಬಿಜಿಎಲ್‌ನ ಈ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ಅಲ್ಲಿ ಕೈಗಾರಿಕಾ ಲೇಔಟ್ ನಿರ್ಮಾಣ ಮಾಡಿ ಕೈಗಾರಿಕೆಗಳಿಗೆ ನೀಡುವುದಾಗಿ ಹೇಳಿದರು.
ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ರೂಪಕಲಾ ಅವರು ಕೆಜಿಎಫ್‌ನಲ್ಲಿ ಚಿನ್ನದ ಗಣಿಯನ್ನು ೨೦ ವರ್ಷಗಳಿಂದ ಬಂದ್ ಮಾಡಲಾಗಿದೆ. ಇಲ್ಲಿ ಇನ್ನೂ ಬಂಗಾರವಿದೆ. ಈ ಗಣಿಯನ್ನು ಪುನರಾರಂಭಿಸಿ ಎಂದು ಒತ್ತಾಯಿಸಿದ್ದರು. ಹಾಗೆಯೇ ಬಿಇಎಂಎಲ್‌ನ ಬಂಡವಾಳ ಹೂಡಿಕೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಲು ಮುಂದಾಗಿದೆ. ಇದರಿಂದ ಈ ಕಾರ್ಖಾನೆ ಖಾಸಗೀಕರಣಗೊಳ್ಳುತ್ತಿದೆ. ಈ ಕಾರ್ಖಾನೆಯಿಂದ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆದುಕೊಳ್ಳುವುದರಿಂದ ಕೆಜಿಎಫ್‌ನಿಂದ ೨ ಸಾವಿರ ರಾಜ್ಯದಲ್ಲಿ ೧೧ ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಬಗ್ಗೆ ಮಾಹಿತಿ ಇದೆಯೇ ಎಂದು ಸರ್ಕಾರವನ್ನು ಕೇಳಿದ್ದರು.
ಸಚಿವ ಜಗದೀಶ್‌ಶೆಟ್ಟರ್ ಇವರೆಡೂ ಪ್ರತ್ಯೇಕ ಪ್ರಶ್ನೆಗಳಾಗುತ್ತವೆ ಎಂದು ಹೇಳಿದಾಗ, ಸ್ವಲ್ಪ ಸಿಟ್ಟಾದ ರೂಪಾಕಲಾ ಅವರು ಈ ಬಗ್ಗೆ ನನಗೆ ಮಾತನಾಡಲು ಅವಕಾಶ ಕೊಡಬೇಕು. ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಸಭಾಧ್ಯಕ್ಷರು ನೀವು ಭಾಷಣ ಮಾಡಬೇಡಿ. ಇದು ಪ್ರಶ್ನೋತ್ತರ ನಿರ್ದಿಷ್ಟ ಪ್ರಶ್ನೆ ಕೇಳಿ ಎಂದು ಹೇಳಿದರಾರದೂ ರೂಪಕಲಾ ಅವರು, ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆಯುತ್ತಿರುವ ಬಗ್ಗೆಯೇ ಪ್ರಸ್ತಾಪಿಸಿದಾಗ ಸಭಾಧ್ಯಕ್ಷರು ಪ್ರಶ್ನೋತ್ತರ ಮುಗಿದಿದೆ ಎಂದು ಮುಂದಿನ ಕಲಾಪವನ್ನು ಕೈಗೆತ್ತಿಕೊಂಡರು.
ಇಷ್ಟಾದರೂ ರೂಪಕಲಾ ಅವರು ನಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಲೆ ನಿಂತಿದ್ದರು. ಆಗ ಇತರ ಸದಸ್ಯರು ನೆರವಿಗೆ ದಾವಿಸಿದಾಗ ಸಭಾಧ್ಯಕ್ಷರು ಬಜೆಟ್ ಮೇಲೆ ಈ ವಿಚಾರ ಮಾತನಾಡಲಿ ಅವಕಾಶ ಕೊಡುತ್ತೇನೆ. ಇದು ಪ್ರಶ್ನೋತ್ತರ ಎಂದು ಹೇಳಿ ಎಲ್ಲದ್ದಕ್ಕೂ ತೆರೆ ಎಳೆದರು.