ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್: ಸಿಎಂ

ಬೆಂಗಳೂರು, ಸೆ. ೧೬- ಕೆ.ಜಿ.ಎಫ್. ನಲ್ಲಿ ಕೈಗಾರಿಕಾ ಟೌನ್ ಶಿಫ್‌ನ್ನು ಆದಷ್ಟು ಬೇಗ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ರೂಪಕಲಾ ಅವರ ಪ್ರಶ್ನೆಗೆ ಕೈಗಾರಿಕಾ ಸಚಿವ ನಿರಾಣಿ ಅವರು ಉತ್ತರ ನೀಡುತ್ತಿದ್ದಾಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕೆಜಿಎಫ್‌ನಲ್ಲಿ ಬಿಇಎಂಎಲ್ ಸಂಸ್ಥೆ ಹಿಂದಿರುಗಿಸಿರುವ ೯೭೩ ಎಕರೆ ಭೂಮಿ ಕಂದಾಯ ಇಲಾಖೆಯ ಸುಪರ್ದಿಯಲ್ಲಿದೆ. ಈ ಜಮೀನನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಿಸಿ ಕೈಗಾರಿಕಾ ಟೌನ್‌ಶಿಫ್‌ನ್ನು ಸ್ಥಾಪಿಸುವುದಾಗಿ ಹೇಳಿದರು.
ಬೆಂಗಳೂರು ಸುತ್ತಮುತ್ತ ಭೂಮಿಯ ಬೆಲೆ ಹೆಚ್ಚಿದೆ. ಹೀಗಾಗಿ ಕಂದಾಯ ಇಲಾಖೆಯ ಈ ಜಾಗದಲ್ಲಿ ಟೌನ್‌ಶಿಫ್ ಸ್ಥಾಪಿಸಲು ತೀರ್ಮಾನ ಮಾಡಿದ್ದೇವೆ. ಬಜೆಟ್‌ನಲ್ಲೂ ಕೈಗಾರಿಕಾ ಟೌನ್‌ಶಿಫ್ ಬಗ್ಗೆ ಪ್ರಸ್ತಾಪಿಸಿದ್ದೇನೆ ಎಂದರು.
ಕೆಜಿಎಫ್‌ನಲ್ಲಿ ಚಿನ್ನದ ಗಣಿ ಮುಚ್ಚಿದ ನಂತರ ಉದ್ಯೋಗ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕಂದಾಯ ಇಲಾಖೆಯಿಂದ ಕೈಗಾರಿಕಾ ಇಲಾಖೆಗೆ ಭೂಮಿಯನ್ನು ಹಸ್ತಾಂತರಿಸಿ ಕೆಜಿಎಫ್‌ನಲ್ಲಿ ಸುಸಜ್ಜಿತ ಕೈಗಾರಿಕಾ ಟೌನ್‌ಶಿಫ್ ಮಾಡುತ್ತೇವೆ ಎಂದರು.
ಇದಕ್ಕೂ ಮೊದಲು ಉತ್ತರ ನೀಡಿದ ಕೈಗಾರಿಕಾ ಸಚಿವ ನಿರಾಣಿ, ಈ ಭೂಮಿ ಕಂದಾಯ ಇಲಾಖೆಯ ಸುಪರ್ದಿಯಲ್ಲಿದೆ. ನಮಗೆ ಹಸ್ತಾಂತರ ಮಾಡಿದರೆ ಟೌನ್‌ಶಿಫ್ ಮಾಡುತ್ತೇವೆ. ಮುಖ್ಯಮಂತ್ರಿಗಳಿಗೂ ಈ ವಿಚಾರವನ್ನು ಗಮನಕ್ಕೆ ತಂದಿದ್ದೇನೆ. ಕಂದಾಯ ಇಲಾಖೆ ಇದುವರೆಗೂ ಭೂಮಿಯನ್ನು ಹಸ್ತಾಂತರಿಸಿಲ್ಲ ಎಂದು ಹೇಳಿದ್ದರು.