
ಕಲಬುರಗಿ:ಆ.14:ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೆಕೆಆರ್ ಡಿಬಿಯಲ್ಲಿ ಅಕ್ರಮ ನಡೆದಿತ್ತು. ಆಗ ಕೆಕೆಆರ್ ಡಿಬಿ ಎನ್ನುವುದು ‘ಕಳ್ಳರ ಕಾಕರ ಅಭಿವೃದ್ದಿ ನಿಗಮ ‘ ವಾಗಿತ್ತು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಜಯ್ ಸಿಂಗ್ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಯಚೂರು ವಿವಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತಾಗಿ ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ ಅವರು ಕೆಕೆಆರ್ ಡಿಬಿಯಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ. ಅಜಯ್ ಸಿಂಗ್ ಅವರೇ ಈಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
” ಅಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಕಲಬುರಗಿ ಮಾತ್ರವಲ್ಲ ಇಡೀ ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆ ಹೆಚ್ಚಾಗಿದೆ. ಈ ಭಾಗದ ಜನರಿಗೆ ಆಗಿರುವ ಅನ್ಯಾಯಕ್ಕೆ ಅವರು ನ್ಯಾಯ ಒದಗಿಸಬೇಕಾಗಿದೆ. ಜೊತೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಮಾಡಬೇಕಾದ ಜವಾಬ್ದಾರಿಯೂ ಕೂಡಾ ಇದೆ ” ಎಂದು ಖರ್ಗೆ ಒತ್ತಿ ಹೇಳಿದರು.
ಅಜಯ್ ಸಿಂಗ್ ಅವರಷ್ಟು ನನಗೆ ತಾಳ್ಮೆ ಇಲ್ಲ. ಅವರಲ್ಲಿರುವ ತಾಳ್ಮೆಯ ಹತ್ತರಷ್ಟು ತಾಳ್ಮೆ ನನಗೆ ಇರಬೇಕಿತ್ತು ಎಂದು ನಾನು ಬಯಸುತ್ತೇನೆ. ಆದರೆ ಏನು ಮಾಡುವುದು ನನಗೆ ಅಂತಹ ತಾಳ್ಮೆ ಇಲ್ಲ ಎಂದು ನಗುತ್ತ ಹೇಳಿದ ಖರ್ಗೆ ಅವರು ಅಜಯ್ ಸಿಂಗ್ ಅವರ ಪ್ರಬುದ್ಧತೆ, ತಾಳ್ಮೆ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಅವರಿಗೆ ಯಶಸ್ಸುಸಿಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜಯ್ ಸಿಂಗ್, ” ನಾನು ಇಲ್ಲಿಗೆ ಬರುವ ಮುನ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಉಸ್ತುವಾರಿ ರಂದೀಪ್ ಸುರ್ಜೇವಾಲ ಮುಂತಾದ ನಾಯಕರು ಸಹಕಾರ ನೀಡಿದ್ದರಿಂದ ಕೆಕೆಆರ್ ಡಿಬಿ ಹುದ್ದೆ ಸಿಕ್ಕಿದೆ” ಎಂದರು.
ಹುದ್ದೆ ಸಣ್ಣದು ಹಾಗೂ ದೊಡ್ಡದು ಎನ್ನುವುದಕ್ಕಿಂತ ನಾವು ಆ ಹುದ್ದೆಯಲ್ಲಿದ್ದು ಹೇಗೆ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದ ಅಜಯ್ ಸಿಂಗ್, ಮಂತ್ರಿಯಾಗಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದು ತಪ್ಪಲ್ಲ, ಏನಾದರೂ ಗುರಿ ಇದ್ದರೆ ಮಾತ್ರ ಏನಾದರೊಂದು ಸಾಧನೆ ಮಾಡುತ್ತೇವೆ. ಆದರೆ, ಎಲ್ಲರನ್ನೂ ಮಂತ್ರಿ ಮಾಡಲು ಆಗುವುದಿಲ್ಲ. ಅದನ್ನು ಅರಿತುಕೊಂಡು ನಾವು ಕೆಲಸ ಮಾಡಬೇಕಾಗುತ್ತದೆ. ಈಗ ಸಿಕ್ಕಿರುವ ಹುದ್ದೆಗೆ ಕಕ ಭಾಗದ ಎಲ್ಲ ತಾಲೂಕುಗಳ ಅಭಿವೃದ್ದಿ ಮಾಡುವ ಜವಾಬ್ದಾರಿ ಇದೆ ಎಂದು ಹೇಳಿದರು.
ವೇದಿಕೆಯ ಮೇಲೆ ಕೆಕೆಆರ್ಡಿಬಿಯ ಅಧ್ಯಕ್ಷರಾದ ಅಜಯ್ ಸಿಂಗ್, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವ ರೇವುನಾಯಕ ಬೆಳಮಗಿ, ಸುಭಾಷ್ ರಾಠೋಡ, ಶರಣು ಮೋದಿ, ಬಸವರಾಜ ಭೀಮಳ್ಳಿ ಸೇರಿದಂತೆ ಹಲವರಿದ್ದರು.