ಕೆಕೆಆರ್ ಆರ್‌ಸಿಬಿ ಮುಖಾಮುಖಿ ಗೆಲ್ಲುವ ವಿಶ್ವಾಸದಲ್ಲಿ ಎರಡೂ ತಂಡಗಳು


ಅಬುಧಾಭಿ, ಸೆ. ೨೦- ಐಪಿಎಲ್ ಟೂರ್ನಿಯಲ್ಲಿಂದು ಕೆಕೆಆರ್ ಮತ್ತು ಆರ್‌ಸಿಬಿ ಸೆಣಸಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಪಡೆ ಇಂದಿನ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.
ಆರ್‌ಸಿಬಿ ನಾಯಕತ್ವಕ್ಕೂ ವಿದಾಯ ಹೇಳಿರುವ ಕೊಹ್ಲಿಗೆ ಈ ಟೂರ್ನಿ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಕಳದೆ ೮ ಆವೃತ್ತಿಯಿಂದಲೂ ನಾಯಕತ್ವ ವಹಿಸಿಕೊಂಡಿರುವ ಕೊಹ್ಲಿ ಇದುವೆರೆಗೂ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯಾದರೂ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟು ನಾಯಕತ್ವಕ್ಕೆ ವಿದಾಯಕ ಹೇಳುವ ಬಯಕೆ ಅವರದ್ದಾಗಿದೆ.
ಆರ್ ಸಿಬಿ ೭ ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ. ಬಾಕಿ ಇರುವ ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪಲಿದೆ. ನಾಯಕ ಕೊಹ್ಲಿ, ದೇವದತ್ತ ಪಡಿಕ್ಕಲ್ , ಎಬಿಡಿ, ಗ್ಲೆನ್ ಮ್ಯಾಕ್ಸ್ ವೆಲ್ ಅವರು ಬ್ಯಾಟಿಂಗ್ ಬೆನ್ನೆಲುಬಾದರೆ ಬೌಲಿಂಗ್ ನಲ್ಲು ಮೊಹ್ಮದ್ ಸಿರಾಜ್, ಜೀಮಿಸನ್ ಹಾಗೂ ಯುಜುವೇಂದ್ರ ಚಹಲ್ ಬೌಲಿಂಗ್ ಭೂಮಿಕೆ ನಿಭಾಯಿಸಲಿದ್ದಾರೆ.
ಮತ್ತೊಂದೆಡೆ ೭ ಪಂದ್ಯಗಳಲ್ಲಿ ಕೇವಲ ೨ ಪಂದ್ಯಗಳನ್ನು ಮಾತ್ರ ಗದ್ದಿರುವ ಕೆಕೆಆರ್‌ಗೆ ಕಠಿಣ ಸವಾಲು ಎದುರಾಗಿದೆ. ಬಾಕಿ ಉಳಿದಿರುವ ೭ ಪಂದ್ಯಗಳಲ್ಲಿ ಕನಿಷ್ಠ ಐದು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ತಲುಪಲು ಸಾಧ್ಯ. ಆದ್ದರಿಂದ ಕೆಕೆಆರ್ ಗೆ ಬಾಕಿ ಉಳಿದಿರುವ ಪ್ರತಿಯೊಂದು ಪಂದ್ಯವೂ ಮುಖ್ಯವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಇಯಾನ್ ಮೊರ್ಗನ್ ನೇತೃತ್ವದ ಬಳಗ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಉಭಯ ತಂಡಗಳಿಗೂ ಈ ಪಂದ್ಯ ಮುಖ್ಯವಾಗಿದ್ದು ಗೆಲುವಿಗಾಗಿ ತೀವ್ರ ಪೈಪೋಟಿ ಏರ್ಪಡಲಿದ್ದು ಇಂದಿನ ಪಂದ್ಯ ಕುತೂಹಲ ಕೆರಳಿಸಿದೆ.ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಅನುಕೂಲವಾಗಲಿದೆ.ಆದ್ದರಿಂದ ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ.