ಕೆಕೆಆರ್‍ಡಿಬಿ ಶೇ.30 ಅನುದಾನ 7 ಜಿಲ್ಲೆಗಳ ಶಿಕ್ಷಣ ಕ್ಷೇತ್ರಕ್ಕೆ ಮೀಸಲು: ಡಾ. ಅಜಯ್ ಸಿಂಗ್

ಕಲಬುರಗಿ:ಸೆ.6:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಒಟ್ಟಾರೆ ಅನುದಾನ 5 ಸಾವಿರ ಕೋಟಿ ರೂಪಾಯಿಯಲ್ಲಿ ಶೇ.30ರಷ್ಟು ಕಲ್ಯಾಣ ಬಾಗದ 7 ಜಿಲ್ಲೆಗಳ 41 ಅಸೆಂಬ್ಲಿ ಕ್ಷೇತ್ರಗಳ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್‍ಸಿಂಗ್ ಹೇಳಿದ್ದಾರೆ.
ಜೇವರ್ಗಿಯಲ್ಲಿ ನಡೆದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನಲ್ಲಿ ಶಿಕ್ಷಣ ರಂಗ ಅನೇಕ ಸಮಸ್ಯೆಗಳಿಂದ ಕಳೆ ಗುಂದಿದೆ. ನಾವು ಶಿಕ್ಷಣ ರಂಗಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ತರಗತಿ ಕೋಣೆಗಳ ದುರಸ್ಥಿ, ನೂತನ ಕೋಣೆಗಳ ಕಾಮಗಾರಿ, ಶಿಕ್ಷಕರ ಕೊರತೆ ನೀಗಿಸೋದು, ಆವರಣ ಗೋಡೆ, ಶಾಲೆಗಳಿಗೆ ಮೂಲ ಸವಲತ್ತು ನೀಡುವುದು ಇವೆಲ್ಲದಕ್ಕೂ ಮಂಡಳಿ ಇಡೀ ವರ್ಷ ಒತ್ತು ನೀಡಲಿದೆ ಎಂದರು.
ಮೂಲ ಸವಲತ್ತು, ಶಿಕ್ಷಕರ ಲಭ್ಯತೆ ಇಲ್ಲದೆ ಹೋದಲ್ಲಿ ಫಲಿತಾಂಶ ಹೇಗೆ ನಿರೀಕ್ಷಿಸಿದೋದು? ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ ನಾವು ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಬೆಂದಾಗೆಲ್ಲಾ ಕೆಳಗಿನ ಹಂತದಲ್ಲೇ ಇರುತ್ತೇವೆ. ಈ ಪರಿಸ್ಥಿತಿ ಹೋಗಲಾಡಿಸಬೇಕಾದರೆ ನಾವು ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಸಾಧ್ಯ ಎಂದರು.
ಈಗಾಗಲೇ ಜೇವರ್ಗಿಯಲ್ಲಿ ಅಕ್ಷರ ಅವಿಷ್ಕಾರ ಮಿಷನ್ 100 ಯೋಜನೆ ಜಾರಿಗೆ ತರಲಾಗಿದ್ದು ಇದರ ಫಳವಾಗಿ ತಾವು ಪ್ರತಿನಿಧಿಸುವ ತಾಲೂಕು ಜಿಲ್ಲೆಯಲ್ಲೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿ ನಂಬರ್ ಒನ್ ಸ್ಥಾನದಲ್ಲಿದೆ. ಇದೇ ಮಾದರಿಯಲ್ಲಿ ಕಲ್ಯಾಣದ ಎಲ್ಲಾ 41 ಕ್ಷೇತ್ರಗಳಲ್ಲಿ ಅಕ್ಷರ ಅವಿಷ್ಕಾರ ಅನುಷ್ಠಾನ ಮಾಡಲಾಗುತ್ತದೆ ಎಂದರು.
ಕಲ್ಯಾಣದ 7 ಜಿಲ್ಲೆಗಳಲ್ಲಿ 3,300 ಶಿಕ್ಷಕರ ಕೊರತೆ ಇದೆ. ಇದಕ್ಕಾಗಿ ಮಂಡಳಿ ಅತಿಥಿ ಶಿಕ್ಷಕರ ನೇಮಕಕ್ಕೆ 35 ಕೋಟಿ ರು. ಅನುದಾನ ಮೀಸಲಿಟ್ಟಿದೆ. ಇನ್ನು 45 ದಿನದಲ್ಲಿ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಮಾಡಿ ಮುಗಿಸಲಾಗುತ್ತದೆ. ಎಲ್ಲಿಯೂ ಶಿಕ್ಷಕರ ಕೊರತೆ ಎಂಬ ಕೂಗು ಕೇಳಿರಬಾರದು, ಆ ದಿಶೆಯಲ್ಲಿ ಮಂಡಳಿ ಅದಾಗಲೇ ಕ್ರಮಕ್ಕೆ ಮುಂದಾಗಿದೆ ಎಂದರು.
ಅಕ್ಷರ, ಅರಣ್ಯ ಹಾಗೂ ಆರೋಗ್ಯ ಈ ಮೂರು ವಿಷಯಗಳಲ್ಲಿ ಮುಂದಿನ ದಿನಗಳಲ್ಲಿ ಕೆಕೆಆರ್‍ಡಿಬಿ ಕೆಲಸ ಮಾಡಲು ನೀಲನಕಾಶೆ ರೂಪಿಸಿ ಮುಂದಡಿ ಇಡಲಿದೆ. ಇದಕ್ಕಾಗಿ ಈ ಭಾಗದ ಎಲ್ಲಾ ಶಿಕ್ಷಕರು, ಪೆÇೀಷಕರು, ಜನತೆ ಮಂಡಳಿಗೆ ಸಹಕಾರ ನೀಡಬೇಕು ಎಂದು ಡಾ. ಅಜಯ್ ಸಿಂಗ್ ಕೋರಿದ್ದಾರೆ.
ಜೇವರ್ಗಿ ಸಮಾರಂಭದಲ್ಲಿ ಪ್ರಾಥಮಿಕ, ಪ್ರೌಢಶಾಲೆಯ ಅನೇಕ ಸಾಧಕ ಶಿಕ್ಷಕರಿಗೆ ಸತ್ಕರಿಸಲಾಯ್ತು. ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಸೊನ್ನ ಮಠದ ಶಿವಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ತಾಲೂಕಿನ ಬಿಇಓ, ತಹಸೀಲ್ದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ನೌಕರರ ಸಂಘದ ಅಧ್ಯಕ್ಷ ಗುಡುಲಾಲ್ ಶೇಖ್, ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಹೊಸ್ಮನಿ ಮಾತನಾಡುತ್ತ ಜೇವರ್ಗಿ ಶಾಲೆಗಳ ಮೂಲ ಸವಲತ್ತಿನ ಬರ ನೀಗಿಸುಲ ಆದ್ಯತೆ ನೀಡಲು ಕೋರಿದರು.