ಕೆಕೆಆರ್‍ಡಿಬಿ ಅನುದಾನ ದುರ್ಬಳಕೆ ತನಿಖೆ ಆದೇಶ: ಅಲ್ಲಮಪ್ರಭು ಸ್ವಾಗತ

ಕಲಬುರಗಿ,ಜೂ,3: ಬಿಜೆಪಿ ಅಧಿಕಾರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 3000 ಕೋಟಿ ರುಪಾಯಿಗೂ ಹೆಚ್ಚಿನ ಅನುದಾನ ದುರ್ಬಳಕೆ ಪ್ರಕರಣದ ಸಮಗ್ರ ತನಿಖೆಗೆ ಆದೇಶ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಸ್ವಾಗತಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಕೆಕೆಆರ್‍ಡಿಬಿ 3 ಸಾವಿರ ಕೋಟಿ ರು ಅನುದಾನ ಬಳಕೆಯಲ್ಲಿ, ಕಕ ಮಾನವಾಭಿವೃದ್ಧಿ ಸಂಘದ ಅನುದಾನ ಬಳಕೆಯಲ್ಲಿ ಭಾರಿ ಅಕ್ರಮ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‍ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ತಕ್ಷಣ ಹಗರಣದ ಸಮಗ್ರ ತನಿಖೆಗೆ ಆದೇಶ ಮಾಡಿರುವದು ಸರಿಯಾಗಿದೆ. ತಪ್ಪಿತಸ್ಥರು ಯಾರು ಎಂಬುದು ಹೊರಬಂದು ಅವರಿಗೆ ಕಾನೂನು ರೀತಿ ಕಠಿಣ ಶಿಕ್ಷೆಯಾಗಲಿ. ಸರ್ಕಾರ ಆದಷ್ಟು ಬೇಗ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆ ಎಳೆಯುವಂತಾಗಲಿ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಕೆಕೆಆರ್‍ಡಿಬಿ ಹಾಗೂ ಕಕ ಮಾನವಾಭಿವೃದ್ಧಿ ಸಂಘದಲ್ಲಿನ ಅಕ್ರಮಗಳು, ಕಾನೂನು ಉಲ್ಲಂಘನೆಯ ಪ್ರಕರಣಗಳನ್ನು ಸಿಎಜಿ ತನ್ನ ವರದಿಯಲ್ಲೂ ಸ್ಪಷ್ಟವಾಗಿ ನಮೂದಿಸಿದೆ. ಹಗರಣದ ತನಿಖೆಯಾಗುವಂತೆ ನೋಡಿಕೊಂಡಿರುವ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಕಾಳಜಿ, ಕಳಕಳಿಗೆ ಸದಾ ಋಣಿ. ಅನುದಾನ ಲೂಟಿಕೋರರ ಪಾಲಾಗದೆ ಈ ನೆಲದ ಪ್ರಗತಿಗೆ ಒದಗಲೇಬೇಕು. ಈ ವಿಚಾರದಲ್ಲಿ ಶಾಸಕರೆಲ್ಲರೂ ಪ್ರಿಯಾಂಕ್ ಅವರ ಜೊತೆಗಿರುವದಾಗಿಯೂ ಅಲ್ಲಮಪ್ರಭು ಪಾಟೀಲ್ ಹೇಳಿದ್ದಾರೆ.