ಕೆಕೆಅರ್ ವಿರುದ್ದ ಸಿಎಸ್ ಕೆಗೆ 18 ರನ್ ಗಳ ಗೆಲುವು

ಮುಂಬೈ, ಏ.21-ಡುಪ್ಲೆಸಿಸ್ ಹಾಗೂ ಗಾಯಕವಾಡ್ ಅಬ್ಬರದ ಬ್ಯಾಟಿಂಗ್ , ದೀಪಕ್ ಚಾಹರ್ ಮಾರಕ ಬೌಲಿಂಗ್ ನೆರವಿನಿಂದ ಸಿಎಸ್ ಕೆ , ಕೆಕೆಆರ್ ವಿರುದ್ಧ 18 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಜಯಭೇರಿ ಬಾರಿಸಿದೆ.


ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 220 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಸಿಎಸ್ ಕೆ ಪರ ಡುಪ್ಲೆಸಿಸ್ ಹಾಗೂ ಗಾಯಕ್ ವಾಡ್ ಇನ್ನಿಂಗ್ಸ್ ಆರಂಭಿಸಿ ಕೆಕೆಆರ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿ ಮೊದಲ ವಿಕೆಟ್ ಗೆ 115 ರನ್ ಸೇರಿಸಿದರು.
ಗಾಯಕ್ ವಾಡ್ ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿ 64 ರನ್ ಬಾರಿಸಿ ಚಕ್ರವರ್ತಿ ಬೌಲಿಂಗ್ ನಲ್ಲಿ ಔಟಾದರು. ಮೊಯಿನ್ ಅಲಿ 25 ಹಾಗೂ ನಾಯಕ ಧೋನಿ 17 ರನ್ ಗಳಿಸಿದರು.
ಡುಪ್ಲೆಸಿಸ್ 60 ಎಸೆತಗಳಲ್ಲಿ 9 ಬೌಂಡರಿ ನಾಲ್ಕು ಭರ್ಜರಿ ಸಿಕ್ಸರ್ ನೊಂದಿಗೆ ಅಜೇಯ
95 ರನ್ ಗಳಿಸಿ ಐದು ರನ್ ಗಳಿಂದ ಶತಕ ವಂಚಿತರಾದರು. ಜಡೇಜಾ ಆಜೇಯ ಆರು ರನ್ ಗಳಿಸಿದರು.
ಬೃಹತ್ ಮೊತ್ತದ ಸವಾಲಿನ ಬೆನ್ನಹತ್ತಿದ ಕೆಕೆಆರ್ 31 ರನ್ ಗಳಾಗುವಷ್ಟರಲ್ಲಿ ಐದು ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಮೊರ್ಗನ್ ಸೇರಿದಂತೆ ಇತರ ಆಟಗಾರರು ಉತ್ತಮ ರನ್ ಕಲೆಹಾಕಲು ವಿಫಲರಾದರು.
ಆದರೆ ಆರನೇ ವಿಕೆಟ್ ಗೆ ದಿನೇಶ್ ಕಾರ್ತಿಕ್ ಮತ್ತು ರಸೆಲ್ ಉತ್ತಮ ಜತೆಯಾಟವಾಡಿ ರನ್ ಕಲೆಹಾಕಿದರು.

ರಸೆಲ್ 22 ಎಸೆತಗಳಲ್ಲಿ ಮೂರು ಬೌಂಡರಿ 6 ಸಿಕ್ಸರ್ ಸಿಡಿಸಿ 54 ರನ್ ಗಳಿಸಿ ಔಟಾದರು. ದಿನೇಶ್ ಕಾರ್ತಿಕ್ 24 ಎಸೆತಗಳಲ್ಲಿ ನಾಲ್ಕು ಬೌಂಡರಿ ಎರಡು ಸಿಕ್ಸರ್ ಸಿಡಿಸಿ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಪ್ಯಾಟ್ ಕಮಿನ್ಸ್ ಕಡೆ ಗಳಿಗೆಯವರೆಗೂ ನಡೆಸಿದ ಹೋರಾಟ ವ್ಯರ್ಥವಾಯಿತು.34 ಎಸೆತಗಳಲ್ಲಿ 4 ಬೌಂಡರಿ ಹಾಗೂ ಆರು ಸಿಕ್ಸರ್ ಬಾರಿಸಿ ಅಜೇಯ 66 ರನ್ ಬಾರಿಸಿದರು.
ಅಂತಿಮವಾಗಿ 20 ಓವರ್ ಗಳಲ್ಲಿ ಕೆಕೆಆರ್ 202 ರನ್ ಗಳಿಗೆ ಸರ್ವಪತನ ಕಂಡು 18 ರನ್ ಗಳಿಂದ ಪರಾಭವಗೊಂಡಿತು.


ಸಿಎಸ್ ಕೆ ಪರ ದೀಪಕ್ ಚಹರ್ 4 ಹಾಗೂ‌ ಲುಂಗಿ ನಿಗ್ಡಿ ಮೂರು ವಿಕೆಟ್ ಪಡೆದರು.