
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೯; ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಶ್ರಮಜೀವಿ ಕಾಂ.ಸಂಪಾಪತಿ ಅವರ ಹೆಸರು ನಾಮಕರಣ ಮಾಡುವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಸಮಿತಿ ಆಗ್ರಹಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಸತೀಶ್ ಅರವಿಂದ್ ಇತಿಹಾಸದಲ್ಲಿ ದಾವಣಗೆರೆ ನಗರವು ಬೆಳವಣಿಗೆ ಹೊಂದಲು ಹಲವು ನಾಯಕರು ಶ್ರಮಿಸಿದ್ದಾರೆ. ಅದರಲ್ಲಿ ಅಗ್ರಗಣ್ಯವಾಗಿ ಶ್ರಮಜೀವಿ ಕಾ.ಪಂಪಾಪತಿ ಯವರು ಚಿರಸ್ಥಾಯಿಯಾಗಿ ಉಳಿದಿದ್ದಾರೆ. ೧೯೬೦-೬೧ ರಲ್ಲಿ ಮಿಲ್ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಮಾಲೀಕ ವರ್ಗ ಮತ್ತು ತಾಲ್ಲೂಕು ಆಡಳಿತದ ವಿರುದ್ಧದ ಹೋರಾಟದಲ್ಲಿ ಕಾಂ.ಪಂಪಾಪತಿ ಯವರು ಹೋರಾಟಕ್ಕೆ ಪಾದಾರ್ಪಣೆ ಮಾಡುತ್ತಾರೆ , ೧೯೭೪ ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಪಂಪಾಪತಿಯವರು ಗೆದ್ದು ಸಂಪೂರ್ಣ ನಾಲ್ಕು ವರ್ಷ ನಗರಸಭೆಯ ಅಧ್ಯಕ್ಷರಾದ ಸಂದರ್ಭದಲ್ಲಿ ದಾವಣಗೆರೆ ನಗರದಲ್ಲಿ ೬ ಸಾವಿರ ಸಸಿಗಳನ್ನು ನೆಟ್ಟು ಪೋಷಣೆ ಮಾಡಿದ್ದರು ಎಂದರು.ಬಾತಿಕೆರೆಯನ್ನು ಶುದ್ದೀಕರಣಂಗೊಳಿಸಿ ದಾವಣಗೆರೆ ಜನತೆಗೆ ದಿನಕ್ಕೆ ಎರಡು ಬಾರಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾರೆ , ನಗರದ ಯುವಕರಿಗಾಗಿ ವ್ಯಾಯಾಮ ಶಾಲೆಗಳು ಮತ್ತು ಗರಡಿಮನೆ ನಿರ್ಮಾಣಕ್ಕೆ ಪ್ರೋತ್ಸಾಹ ಕೊಡುತ್ತಿದ್ದರು ಆ ವ್ಯಾಯಾಮ ಶಾಲೆಗಳನ್ನು ನಗರದಲ್ಲಿ ಈಗಲೂ ಕಾಣಬಹುದು ೧೯೭೮ ರಲ್ಲಿ ಶಾಸಕರಾಗಿ ಚುನಾಯಿತರಾದ ಮೇಲೆ ಹೋರಾಟಮಾಡಿ ಮೊದಲಬಾರಿಗೆ ದಾವಣಗೆರೆಗೆ ಎರಡು ನಗರ ಸಾರಿಗೆ ಬಸ್ ನೀಡಿದ್ದರು ಹಾಗೂ ದಾವಣಗೆರೆಯು ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಮತ್ತು ಡಿಪೋ ಸ್ಥಾಪನೆಗಾಗಿ ಈಗಿನ ಮಹಾನಗರ ಪಾಲಿಕೆಯ ಗಾಂಧೀಜಿ ಪ್ರತಿಮೆ ಮುಂಭಾಗ ಸತತ ಐದು ದಿನಗಳ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ ಪರಿಣಾಮ ಅಂದಿನ ಸರ್ಕಾರ ದಾವಣಗೆರೆ ನಗರಕ್ಕೆ ಕೆಎಸ್ ಆರ್ ಟಿಸಿ, ಬಾಸ್ ಡಿಪೋ ಹಾಗೂ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಿತು ಎಂದರು.ಕಾರ್ಮಿಕ ಮುಖಂಡ ಹೆಚ್.ಜಿ. ಉಮೇಶ್ ಮಾತನಾಡಿ, ಪಂಪಾಪತಿ ಹಲವು ಕಾರ್ಮಿಕ ನಾಯಕರನ್ನು ಮುನ್ನೆಲೆಗೆ ತಂದಿದ್ದು ಅದೇ ಸಂದರ್ಭದಲ್ಲಿ ನಗರದಲ್ಲಿ ೧೧ ಹೊಸ ಬಡಾವಣೆಯನ್ನು ನಿರ್ಮಾಣ ಮಾಡುವುದರ ಜೊತೆಗೆ 18 ಸಾವಿರ ಆಶಯ ನಿರಾಶ್ರಿತರಿಗೆ ನಿವೇಶನಗಳನ್ನು ಹಂಚಿಕೆಮಾಡಿ ಸೂರು ಮಾಡಿಕೊಟ್ಟಿರುವುದು ಈಗ ಇತಿಹಾಸವಾಗಿದೆ.ಇನ್ನೂ ಹತ್ತು ಹಲವು ಯೋಜನೆಗಳನ್ನು ದಾವಣಗೆರೆ ನಗರಕ್ಕೆ ಶ್ರಮಿಜೀವಿ ಕಾಂ.ಪಂಪಾಪತಿ ನೀಡಿದ್ದಾರೆ ಎಂದರೆ ತಪ್ಪಾಗಲಾರದು. ಹಾಗಾಗಿ ಮರು ನಿರ್ಮಾಣ ವಾಗುತ್ತಿರುವ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಶ್ರಮಜೀವಿ ಕಾಂ.ಪಂಪಾಪತಿ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮೊದಲ ಹಂತವಾಗಿ ಈ ಪತ್ರಿಕಾ ಗೋಷ್ಠಿಯನ್ನು ಮಾಡುತ್ತಿದ್ದೇವೆ ಎಂದರು.ಎರಡನೇ ಹಂತವಾಗಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳುವುದು, ಮೂರನೇ ಹಂತವಾಗಿ ಮುಖ್ಯಮಂತ್ರಿಗಳಿಗೆ ಸಾರಿಗೆ ಸಚಿವರಿಗೆ ಮತ್ತು ಜಿಲ್ಲಾ ಮಂತ್ರಿಗಳ ಬಳಿ ನಿಯೋಗ ಹೋಗುವುದು ಹಾಗೂ ನಾಲ್ಕನೇ ಹಂತವಾಗಿ ದೊಡ್ಡಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುವುದು ಎಂದರು.ಸುದ್ದಿಗೋಷ್ಠಿಯಲ್ಲಿ, ಕೆ.ಹೆಚ್. ಆನಂದರಾಜು, ಮಹಮ್ಮದ್ ರಫೀಕ್, ಎಸ್. ರಾಜೇಂದ್ರ ಬಂಗೇರಾ ಉಪಸ್ಥಿತರಿದ್ದರು.