ಕೆಎಸ್‌ಆರ್‌ಟಿಸಿ ಅಧಿಕಾರಿ ವರ್ಗಾವಣೆಗೆ ಆಗ್ರಹ


ಮಂಗಳೂರು, ಜ.೧೨- ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ನೌಕರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಇಂದು ಪ್ರತಿಭಟನಾ ಧರಣಿ ನಡೆಯಿತು.
ಬಿಜೈನ ಕೆಎಸ್‌ಆರ್‌ಟಿಸಿ ಕಚೇರಿ ಸಮೀಪ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ವಿಭಾಗೀಯ ನಿಯಂತ್ರಣಾಧಿ ಕಾರಿ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕರಾದ ಎಂ. ದೇವದಾಸ್, ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿಗೆ ಕಳೆದ ಅಕ್ಟೋಬರ್‌ನಲ್ಲಿ ವರ್ಗಾವಣೆಯಾಗಿದ್ದರೂ ಪ್ರಭಾವ ಬೀರಿ ಅವರು ಇಲ್ಲೇ ಮುಂದುವರಿದಿದ್ದಾರೆ ಎಂದರು. ಅಧಿಕಾರಿ ಮಹಿಳಾ ನೌಕರರ ಜತೆ ಅಗೌರವದಿಂದ ವರ್ತಿಸುತ್ತಿರುವುದಲ್ಲದೆ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಆದರೆ ನೌಕರರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಭಯಪಡುತ್ತಿದ್ದಾರೆ. ನೌಕರರನ್ನು ದಮನ ಮಾಡುವ ಈ ರೀತಿ ಸಂವಿಧಾನ ವಿರೋಧಿಯಾಗಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಅಧಿಕಾರಿ ದುರ್ವತನೆ ಕುರಿತಂತೆ ಕಳೆದ ಡಿಸೆಂಬರ್ ತಿಂಗಳಿನಿಂದ ದೂರು, ಮನವಿಗಳನ್ನು ನೀಡಲಾಗುತ್ತಿದೆ. ಆದರೆ ಜನಪ್ರತಿನಿಧಿಗಳು ಬೆಂಗಾವಲಾಗಿ ನಿಂತಿರುವುದರಿಂದ ನೌಕರರು ಮಾತ್ರ ದಿನನಿತ್ಯ ಕಿರುಕುಳವನ್ನು ಅನುಭವಿಸಬೇಕಾಗಿದೆ ಎಂದವರು ಹೇಳಿದರು. ಇದು ಸಾಂಕೇತಿಕ ಹೋರಾಟವಾಗಿದ್ದು, ವರ್ಗಾವಣೆ ಮಾಡದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಅವರು ಹೇಳಿದರು. ಪ್ರತಿಭಟನಾಕಾರನ್ನುದ್ದೇಶಿಸಿ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ ಮೊದಲಾದವರು ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಹರೀಶ್ ಪಡೀಲ್, ಸಂಘಟನೆಯ ತಾಲೂಕು ಸಂಚಾಲಕ ರುಕ್ಮಯ ಕಟೀಲು, ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ್ ಕಾಂಚನ್, ರವಿ ಎಸ್.ಕೆಂಜಾರು, ಕೆ. ಚಂದ್ರಕುಮಾರ್, ಬಾಬು ಕುಂದರ್ ಮೊದಲಾವದರು ಉಪಸ್ಥಿತರಿದ್ದರು.