ಕೆಎಸ್‌ಎಂಎಸ್‌ಸಿಎಲ್‌ಗೆ ಅರ್ಹತೆ ಇಲ್ಲದೆ ಅಧಿಕಾರಿ ನೇಮಕ

ಬೆಂಗಳೂರು, ಡಿ.೩೧- ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ಸಿಎಲ್) ಹಲವು ಸಮಸ್ಯೆಗಳು ಹಾಸು ಹೊದ್ದು ಮಲಗಿವೆ. ಇದರ ನಡುವೆ ಸರ್ಕಾರವೇ ಅರ್ಹತೆ ಹೊಂದಿಲ್ಲದ ಅಧಿಕಾರಿಯನ್ನು ನೇಮಕ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವೃಂದ ಮತ್ತು ನೇಮಕಾತಿ (ಸಿ ಆಯಂಡ್‌ಆರ್) ನಿಯಮದಂತೆ ಐಎಎಸ್ ಅಧಿಕಾರಿಯನ್ನು ನಿಯೋಜನೆ ಮೇರೆಗೆ ನೇಮಿಸಬೇಕಿತ್ತು. ಆದರೆ, ಈ ಹುದ್ದೆಗೆ ಸರ್ಕಾರವೇ ಅರ್ಹತೆ ಹೊಂದಿಲ್ಲದ ಕೆಎಎಸ್ ಅಧಿಕಾರಿ ಚಿದಾನಂದ ಸದಾಶಿವ ವಟಾರೆ ಅವರನ್ನು ನಿಯಮಬಾಹಿರವಾಗಿ ತಂದು ಕೂರಿಸಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಈ ಮೂಲಕ ಇನ್ನಷ್ಟು ಭ್ರಷ್ಟಾಚಾರ ನಡೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನಿಗಮ ಎಂಡಿ ಹುದ್ದೆಗೆ ಈ ಅಧಿಕಾರಿ ಬಂದ ಬಳಿಕ ಭ್ರಷ್ಟಾಚಾರ ಮೀತಿ ಮೀರಿದೆ. ಪ್ರತಿ ಟೆಂಡರ್‌ನಲ್ಲಿ ಕಮಿಷನ್ ದಾಹ, ತಮಗೆ ಬೇಕಾದವರಿಗೆ ಕಾರ್ಯಾದೇಶ ಪತ್ರ ನೀಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆಪಾದಿಸಿದ್ದಾರೆ. ಪ್ರಸಕ್ತ ವರ್ಷ ಮುಗಿದು ಹೋಗುತ್ತಿದ್ದರೂ ಔಷಧ ಖರೀದಿಸಿ ಸರ್ಕಾರ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ವಿಫಲರಾಗಿದ್ದಾರೆ. ನಿಗಮದಲ್ಲಿ ಈ ಅಧಿಕಾರಿಗೆ ಸಲಕರಣೆಗೆ ಸಲಹೆಗಾರ ಹುದ್ದೆ ಕರುಣಿಸಲಾಗಿದೆ. ನಿಗಮದ ಡ್ರಗ್ಸ್ ನಿರ್ದೇಶಕಯಾಗಿದ್ದ ವೇಳೆ ಅನೇಕ ಟೆಂಡರ್‌ಗಳಲ್ಲಿ ಅವ್ಯವಹಾರ ನಡೆಸಿ ಅರ್ಹತೆ ಇಲ್ಲದವರಿಗೆ ಕಾರ್ಯಾದೇಶ ಪತ್ರ ನೀಡಿರುವ ಬಗ್ಗೆ ಇವರ ಮೇಲೆ ಗುರುತರ ಆರೋಪಗಳಿವೆ. ಹೀಗಿದ್ದರೂ, ಡಾ.ರಘನಂದನ್ ಅವರನ್ನು ನಿಗಮದ ಸಲಕರಣೆಗೆ ಸಲಹೆಕಾರ ಹುದ್ದೆಗೆ ತಂದು ಕೂರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಶಿಥಿಲಾವಸ್ಥೆಗೆ ನಿಗಮ: ಪ್ರತಿ ಟೆಂಡರ್‌ನಿಂದ ಹಿಡಿದು ಬಿಲ್ ಕ್ಲೀಯರ್ ಮಾಡಿಸಿಕೊಳ್ಳುವರೆಗೂ ಅಧಿಕಾರಿಗಳಿಗೆ ಕಮಿಷನ್ ಸಿಕ್ಕರಷ್ಟೇ ಮುಂದಿನ ಕೆಲಸಗಳು ನಡೆಯುತ್ತವೆ. ಇಲ್ಲದಿದ್ದರೆ, ಅನಗತ್ಯ ಕಾರಣ ಕೊಟ್ಟು ಟೆಂಡರ್ ಪ್ರಕ್ರಿಯೆ ನಡೆಯದಂತೆ ನೋಡಿಕೊಳ್ಳುತ್ತಾರೆ ಎನ್ನುವ ಮಾತುಗಳು ಗುತ್ತಿಗೆದಾರರು ಹೇಳುತ್ತಿದ್ದಾರೆ. ಜತೆಗೆ, ಇ-ಪೇಮೆಂಟ್ ಮಾಡಲ್‌ಗೆ ಗ್ರಹಣ, ಅನಗತ್ಯ ಟೆಂಡರ್ ನಿಯಮಗಳ ಅಳವಡಿಕೆ, ಕೋಟ್ಯಂತರ ರೂಪಾಯಿ ಔಷಧ ಬಿಲ್‌ಗಳ ಬಾಕಿ, ಹಲವು ವರ್ಷಗಳಿಂದ ಇಎಂ, ಭದ್ರತಾ ಠೇವಣಿ ಉಳಿಕೆ ಮತ್ತು ಅಧಿಕಾರಿಗಳ ಕಮಿಷನ್ ದಾಹ ಸೇರಿ ಇತರೆ ಸಮಸ್ಯೆಗಳಿಂದ ಕೆಎಸ್‌ಎಂಎಸ್‌ಸಿಎಲ್ ದಿನೇದಿನೆ ಶಿಥಿಲಾವಸ್ಥೆಗೆ ತಲುಪುತ್ತಿದೆ.
ಅಲ್ಲದೆ, ರಾಜ್ಯದಲ್ಲಿ ಹೊಸ ಸರ್ಕಾರ ಬಂದು ಏಳೆಂಟು ತಿಂಗಳು ಕಳೆದರೂ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣವೇ ಬೀಳದಂತಾಗಿದೆ. ಕೋವಿಡ್ ವೇಳೆ ನಿಗಮದಲ್ಲಿ ಸಾವಿರಾರು ಕೋಟಿ ರೂ.ಭ್ರಷ್ಟಾಚಾರ ನಡೆದಿತ್ತು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್, ಕೋವಿಡ್ ಅಕ್ರಮ ಹಾಗೂ ನಿಗಮದಲ್ಲಿ ನಡೆದಿದ್ದ ಭ್ರಷ್ಟಾಚಾರದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿತ್ತು.
ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದರೂ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕಡಿವಾಣ ಹಾಕದೆ ಇನ್ನಷ್ಟೂ ಭ್ರಷ್ಟಾಚಾರಕ್ಕೆ ಏಡೆ ಮಾಡಿಕೊಟ್ಟಿರುವುದು ಸೋಜಿಗದ ಸಂಗತಿಯಾಗಿದೆ.