ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಜೀಪ್ ಡಿಕ್ಕಿ: ನಾಲ್ವರ ಸಾವು

ಹುಣಸೂರು,ಜ.೦೨-ಅತಿ ವೇಗವಾಗಿ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್ ಟಿಸಿ)ಯ ಎಲೆಕ್ಟ್ರಿಕ್(ಇವಿ) ಪವರ್ ಪ್ಲಸ್ ಬಸ್ ಹಾಗೂ ಜೀಪ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು ಐವರು ಗಾಯಗೊಂಡ ದಾರುಣ ಘಟನೆ ನಗರದ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.ಕೆಎಸ್‌ಆರ್ ಟಿಸಿ ಗೆ ಸೇರ್ಪಡೆಗೊಂಡ ಇವಿ ಪವರ್ ಪ್ಲಸ್ ಬಸ್ ಅಪಘಾತದಲ್ಲಿ ಮೊದಲ ಬಾರಿಗೆ ನಾಲ್ವರು ಮೃತಪಟ್ಟ ಪ್ರಕರಣ ಇದಾಗಿದ್ದು,ಖಾಸಗಿ ಸಹಭಾಗಿತ್ವದ ಅಪಘಾತಗೊಂಡ ಇವಿ ಪವರ್ ಪ್ಲಸ್ ಬಸ್ ಚಾಲಕನಿಗೂ ಗಂಭೀರ ಗಾಯವಾಗಿದೆ,ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆಚ್.ಡಿ. ಕೋಟೆಯ ಅಂತರಸಂತೆ ಬಳಿಯ ಜಿಹಾರ ಹಳ್ಳಿ ನಿವಾಸಿಗಳಾದ ಲೋಕೇಶ್, ಸೋಮೇಶ್ ಮತ್ತು ಸತೀಶ್ ಹಾಗೂ ನಾಗರಹೊಳೆ ಸಮ್ಮಿಪದ ಧಮ್ಮನಕಟ್ಟೆ ನಿವಾಸಿ ಜಿಪ್ ಚಾಲಕ ಮನು ಸಾವನ್ನಪ್ಪಿದ ನತದೃಷ್ಟರಾಗಿದ್ದಾರೆ.
ಗಾಯಗೊಂಡ ಐವರನ್ನು ಸ್ಥಳೀಯ ಹಾಗೂ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರಲ್ಲಿ ನಿಂಗರಾಜು ಹಾಗೂ ಕರಿಯಪ್ಪ ಅವರ ಸ್ಥಿತಿ ಚಿಂತಾಜನಕವಾಗಿದೆ.
ಪಿರಿಯಾಪಟ್ಟಣದಲ್ಲಿ ಶುಂಠಿ ಕೆಲಸಕ್ಕೆ ೮ ಮಂದಿ ಕೂಲಿ ಕಾರ್ಮಿಕರನ್ನು ಚಾಲಕ ಮನು ಜೀಪ್ ನಲ್ಲಿ ಕರೆದುಕೊಂಡು ಬೆಳ್ಳಿಗೆ ೮:೪೫ರ ಸಮಯದಲ್ಲಿ
ಹೋಗುವಾಗ ಮಾರ್ಗ ಮಧ್ಯದ ಬೈಪಾಸ್ ರಸ್ತೆಯ ಅಯ್ಯಪ್ಪ ಸ್ವಾಮಿ ಬೆಟ್ಟದ ತಪ್ಪಲಿನ ಬಳಿ ಎದುರಿನಿಂದ ವೇಗವಾಗಿ ಬಂದ ಕೆಎಸ್‌ಆರ್ ಟಿಸಿ ಇವಿ ಪವರ್ ಪ್ಲಸ್ ಬಸ್ ಎಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಇವಿ ಪವರ್ ಪ್ಲಸ್ ಬಸ್ ಚಾಲಕನಿಗೂ ಗಂಭೀರವಾಗಿ ಗಾಯಗೊಂಡಿದ್ದು ಎರಡು ವಾಹನಗಳು ಜಖಂಗೊಂಡಿವೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಹುಣಸೂರು ಪೊಲೀಸರು ಧಾವಿಸಿ ಪರಿಹಾರ ಕಾರ್ಯ ಕೈಗೊಂಡು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ನಾಲ್ವರು ಗಂಭೀರ:
ಹುಣಸೂರಿನ ಬೈಪಾಸ್ ರಸ್ತೆಯಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಟೋ ಪಲ್ಟಿಯಾಗಿ ಚಾಲಕ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ಕೆ.ಆರ್.ನಗರ ಬೈಪಾಸ್‌ನ ತಿರುವಿನಲ್ಲಿ ನಡೆದಿದೆ.
ಘಟನೆಯಲ್ಲಿ ಆಟೋ ಚಾಲಕ ನಸ್ರುಲ್ಲಾ, ತಮಿಳುನಾಡಿನ ಗಂಗಾಧರ್, ಅಭಿಷೇಕ್, ಮನೋಜ್‌ಕುಮಾರ್ ಸೇರಿದಂತೆ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-೨೭೫ರ ಅಯ್ಯಪ್ಪಸ್ವಾಮಿ ಬೆಟ್ಟದ ಬಳಿ ತಮಿಳುನಾಡು ಮೂಲದವರ ಕಾರಿನ ಟೈರ್ ಪಂಚರಾಗಿದ್ದನ್ನು ಗಮನಿಸುತ್ತಿದ್ದ ವ್ಯಕ್ತಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸೇರಿದಂತೆ ಕಾರಿನವರಿಗೆ ಗಾಯವಾಗಿತ್ತು.
ಗಾಯಾಳುವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಬೈಪಾಸ್ ರಸ್ತೆಯ ಕೆ.ಆರ್.ನಗರ ಕ್ರಾಸ್ ಬಳಿ ಎದುರಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಆಟೋ ಪಲ್ಟಿಯಾಗಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ. ದಾರಿ ಹೋಕರು ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡೂ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.