ಕೆಎಸ್‌ಆರ್‌ಟಿಸಿಗೆ 2814 ಚಾಲಕರು, ನಿರ್ವಾಹಕರ ನೇಮಕ

ಬೆಂಗಳೂರು, ಸೆ. ೨೧- ರಾಜ್ಯದಲ್ಲಿ ಹೊಸದಾಗಿ ಸಾರಿಗೆ ಸಂಸ್ಥೆಗಳಿಗೆ ೨೮೧೪ ಚಾಲಕರು ಹಾಗೂ ನಿರ್ವಾಹಕರನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ನಿಂಬಣ್ಣನವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಸಂಸ್ಥೆಯಲ್ಲಿ ೨೫೦೦ ಚಾಲಕ, ೫೫ ಬ್ಯಾಕ್‌ಲಾಗ್ ಚಾಲಕ ಮತ್ತು ೨೫೦ ಚಾಲಕ ಕಂ ನಿರ್ವಾಹಕ ಬ್ಯಾಕ್‌ಲಾಕ್ ಹುದ್ದೆಗಳು ಸೇರಿದಂತೆ ಒಟ್ಟು ೨೮೧೪ ಹುದ್ದೆಗಳ ನೇಮಕಾತಿಗೆ ೨೦೧೯ನೇ ಸಾಲಿನಲ್ಲಿ ಜಾಹೀರಾತು ನೀಡಲಾಗಿರುತ್ತದೆ. ಆದರೆ ಕೋವಿಡ್ ಕಾರಣದಿಂದ ನೇಮಕಾತಿ ಸ್ಥಗಿತಗೊಂಡಿತ್ತು. ಪ್ರಸ್ತುತ ನೇಮಕಾತಿ ಪ್ರಕ್ರಿಯೆ ಪುನರಾರಂಭಗೊಂಡಿದ್ದು, ೨೮೧೪ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಅವಶ್ಯಕ ಇರುವ ಘಟಕಗಳಿಗೆ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ಕಾರಣದಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಳೆದ ೨ ವರ್ಷಗಳಿಂದ ಯಾವುದೇ ಬಸ್‌ಗಳನ್ನು ಖರೀದಿಸಿರುವುದಿಲ್ಲ. ಮುಂದಿನ ದಿನಗಳಲ್ಲಿ ವಾಹನಗಳನ್ನು ಖರೀದಿಸಿ ಅಗತ್ಯ ಇರುವ ಕಡೆ ಹೊಸ ಬಸ್‌ಗಳನ್ನು ಕೊಡುತ್ತೇವೆ ಎಂದು ಅವರು ತಿಳಿಸಿದರು.