ಕೆಎಫ್ ಎಸ್ ಪರೀಕ್ಷೆ ಪಾಸು ಮಾಡಿದ ಕಲಾದಗಿಗೆ ಸನ್ಮಾನ

ಆಲಮಟ್ಟಿ : ಆ.23:ಅತ ಪಕ್ಕಾ ಹಳ್ಳಿಯ ಹುಡುಗ. ವಿದ್ಯಾರ್ಜನೆ ದಾಹ ನೀಗಿಸಿಕೊಂಡಿದ್ದು ಸಹ ಗ್ರಾಮೀಣ ಪ್ರದೇಶದ ಜ್ಞಾನ ಮಂದಿರದಲ್ಲೇ. ಮನಸ್ಸಿದ್ದರೆ ಮಾರ್ಗ ಎಂಬಂತೆ ಕಷ್ಟ,ಇಷ್ಟ ಪಟ್ಟು ಓದಾಸಕ್ತಿ ಬೆಳೆಸಿಕೊಂಡು ಇಂದು ಗಮನಾರ್ಹ ಸಾಧನೆ ಮಾಡಿದ್ದಾನೆ ಹಳ್ಳಿ ಸೊಗಡಿನ ಈ ಪ್ರತಿಭಾವಂತ. ಸದ್ದಿಲ್ಲದೆ ಗೈದ ಅಮೋಘ ಸಾಧನೆಗೆ ಶಿಕ್ಷಣಾಭಿಮಾನಿಗಳು, ಗ್ರಾಮಸ್ಥರು ಪೂಲ್ ಖುಷ್ ಅಗಿದ್ದಾರೆ. ಅಭಿಮಾನದಿಂದ ಸನ್ಮಾನಿಸಿ ಪ್ರತಿಭಾವಂತ ಈ ಪ್ರತಿಭೆಗೆ ಗೌರವಾಶೀವಾ9ದ ಕರುಣಿಸಿ ಹೆಮ್ಮೆ ಮೆರೆದಿದ್ದಾರೆ. ಇಂಥದೊಂದು ವಿಶೇಷತೆಗೆ ಸಮೀಪದ ಅಬ್ಬಿಹಾಳ ಎಂಬ ಚಿಕ್ಕ ಗ್ರಾಮ ಸಾಕ್ಷಿಯಾಗಿದೆ !
ಹಳ್ಳಿಗಾಡಿನ ಸರ್ಕಾರಿ ಕನ್ನಡ ಶಾಲೆಯಲ್ಲಿಯೇ ಕಲಿತು, ತನ್ನ ಸ್ವಸಾಮಥ್ರ್ಯದಿಂದ ಕರ್ನಾಟಕ ಅರಣ್ಯ ಸೇವೆ (ಕೆಎಫ್ ಎಸ್) ಪರೀಕ್ಷೆ ಪಾಸು ಮಾಡಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ (ಎಸಿಎಫ್)ನೇಮಕಗೊಂಡ ವಿನೋದ ಕಲಾದಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿ ಎಂದು ಗ್ರಾಮದ ಹಿರಿಯ ಮುಖಂಡ, ನಿವೃತ್ತ ಶಿಕ್ಷಕ ಎಂ.ಬಿ. ಗುಡದಿನ್ನಿ ಹೇಳಿದರು.
ಅಬ್ಬಿಹಾಳ ಗ್ರಾಮದಲ್ಲಿ ಕೆಪಿಎಸ್ ಸಿ ಪ್ರಕಟಿಸಿರುವ ಎಸಿಎಫ್ ಹುದ್ದೆಗೆ ಆಯ್ಕೆಯಾಗಿರುವ ತಮ್ಮದೇ ಗ್ರಾಮದ ಯುವಕ ವಿನೋದ ಕಲಾದಗಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ತಂದೆ ಅಪಘಾತದಲ್ಲಿ ನಿಧನರಾದ ಮೇಲೆ ಅಜ್ಜನ ಬಳಿಯೇ ಬೆಳೆದಿರುವ ವಿನೋದ ಕಲಾದಗಿ, ಅಬ್ಬಿಹಾಳ ಅಂತಹ ಅತ್ಯಂತ ಹಳ್ಳಿಗಾಡಿನ ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿತು ಈ ಸಾಧನೆ ಮಾಡಿದ್ದು ವಿಶೇಷ. ಅದಕ್ಕಾಗಿ ಆತ ಪಟ್ಟ ಶ್ರಮವೂ ಹೆಚ್ಚು. ತನ್ನ ಹುದ್ದೆಯಲ್ಲಿಯೇ ವಿಶೇಷ ಸಾಧನೆ ಮಾಡಿ, ಗ್ರಾಮದ ಅಭಿವೃದ್ಧಿಗೂ, ಅದರಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು. ಹಳ್ಳಿಯ ಕನ್ನಡ ಶಾಲೆಯ ಬಗ್ಗೆ ಈತನ ಸಾಧನೆ ಹೆಮ್ಮೆ ಮೂಡುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನೋದ ಕಲಾದಗಿ, 1 ರಿಂದ 10 ನೇ ವರ್ಗದವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತಿರುವೆ, ಎಂಜಿನಿಯರಿಂಗ್ ಪದವಿ ಕಲಿಯುವಾಗ ಸ್ಪರ್ದಾತ್ಮಕ ಪರೀಕ್ಷೆಯ ಒಲುವು ಮೂಡಿತು. ಅದಕ್ಕಾಗಿ ಸತತ ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿದ್ದೇನೆ. ಓದುವಾಗ ಯಾವುದೇ ಒತ್ತಡವಿಲ್ಲದೇ ನಿತ್ಯ 10 ಗಂಟೆಗಳ ಕಾಲ ಓದಿರುವೆ, ಕನ್ನಡ ಮಾಧ್ಯಮದಲ್ಲಿ ಕಲಿತ ಕಾರಣ ಎಲ್ಲವನ್ನು ಎದುರಿಸುವ ಶಕ್ತಿಯೂ ಬೆಳೆದಿದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ವಲ್ಪ ಪರಿಶ್ರಮ ಪಟ್ಟರೇ ಯಶಸ್ಸು ಕಟ್ಟಿಟ್ಟ ಬುತ್ತಿ, ಒಂದು ವರ್ಷ ತರಬೇತಿಯನ್ನು ಪಡೆದಿರುವೆ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶಿಯಾಗಿರುವೆ, ಭಾರತೀಯ ಆಡಳಿತ ಸೇವೆ (ಐಎಎಸ್) ಆಗಬೇಕೆಂಬ ಗುರಿ ಇಟ್ಟು ಓದಿದ್ದೆ. ಈಗ ಕೆಎಫ್ ಎಸ್ ಆಗಿದೆ. ನಾಗರಿಕ ಸೇವಾ ಪರೀಕ್ಷೆಯೂ ಸಿದ್ಧವಾಗುತ್ತಿರುವೆ ಎಂದರು. ಕಠಿಣ ಪರಿಶ್ರಮ ಮಾತ್ರ ಅಗತ್ಯ ಎಂದರು.
ಈರಣ್ಣ ಹಂಚಿನಾಳ, ಬಿ.ಎ. ಮಂಕಣಿ, ಅಂದಾನೆಪ್ಪ ಗುಡದಿನ್ನಿ, ರಾಜು ಪಾಟೀಲ ಮತ್ತೀತರರು ಇದ್ದರು.