ಕೆಎಎಸ್ ಅಧಿಕಾರಿ ಸುಧಾ ವಿಚಾರಣೆಗೆ ಎಸಿಬಿ ನೋಟೀಸ್

ಬೆಂಗಳೂರು,ನ.8-ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ. ಸುಧಾ ಅವರಿಗೆ
ದಾಳಿ ಸಂಬಂಧ ನಾಳೆ ವಿಚಾರಣೆಗೆ ಹಾಜರಾಗಲು ಎಸಿಬಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಆರು ಕಡೆ ದಾಳಿ‌ ಮಾಡಿದ್ದ ಎಸಿಬಿ ಅಧಿಕಾರಿಗಳು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ವಶಪಡಿಸಿಕೊಂಡಿದ್ದು ಅದರ ದಾಖಲೆ ಪತ್ರಗಳು ಹಾಗೂ ಪತ್ತೆಯಾಗಿರುವ ಆಸ್ತಿ-ಪಾಸ್ತಿಯ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್​ ಜಾರಿ ಮಾಡಲಾಗಿದೆ.
ಕೆಎಎಎಸ್ ಅಧಿಕಾರಿ ಡಾ.ಸುಧಾ ಆಪ್ತೆ ಎನ್ನಲಾಗಿರುವ ರೇಣುಕಾ ಚಂದ್ರಶೇಖರ್ ಮನೆ ಮೇಲೂ ರೇಡ್ ಮಾಡಿದ್ದ ಅಧಿಕಾರಿಗಳಿಗೆ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಬ್ಯಾಂಕ್ ಡಿಪಾಸಿಟ್​ಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ
ರೇಣುಕಾ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ ಮೂರೂವರೆ ಕೆ.ಜಿ ಚಿನ್ನ, 7 ಕೆಜಿ ಬೆಳ್ಳಿ, 36 ಲಕ್ಷ ನಗದು, ಸುಮಾರು 250 ಕೋಟಿ ಮೌಲ್ಯದ ಆಸ್ತಿ ಪತ್ರ ಸೀಜ್‌ ಆಗಿದೆ. ರೇಣುಕಾ ಮನೆಯಲ್ಲಿ 40 ಬ್ಯಾಂಕ್​ ಪಾಸ್ ಬುಕ್, 4 ಕೋಟಿ ಡಿಪಾಸಿಟ್ ಪತ್ತೆಯಾಗಿದ್ದು, ನೂರಕ್ಕೂ ಹೆಚ್ಚು ಚೆಕ್​ಗಳು ಅಗ್ರಿಮೆಂಟ್ ಪೇಪರ್​ಗಳು ಪತ್ತೆಯಾಗಿವೆ.
ಇನ್ನು ದಾಳಿ ಸಂಬಂಧ ಅಕ್ರಮ ಸಂಪತ್ತಿನ ಎಣಿಕೆ ನಡೆಯುತ್ತಿದ್ದು, ಒಟ್ಟು ಮೊತ್ತವನ್ನು ಪರಿಶೀಲನೆ ಮಾಡಲಾಗುತ್ತಿದೆ ನಾಳೆಗೆ ಇದು ಪೂರ್ಣವಾಗುವ ಸಾಧ್ಯತೆ ಇದೆ ಎಂದು ಎಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.