ಕೆಎಎಸ್ ಅಧಿಕಾರಿ ಸುಧಾಗೆ ಎಸಿಬಿ ಶಾಕ್

ಬೆಂಗಳೂರು,ನ.೭-ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ. ಸುಧಾ ಅವರ ಮನೆ ಕಚೇರಿ ಸೇರಿ ಆರು ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಶಾಂತಿನಗರದಲ್ಲಿರುವ ಡಾ.ಸುಧಾ ಅವರ ಕಚೇರಿ,ಕೊಡಿಗೆಹಳ್ಳಿಯ ತಿಂಡ್ಲು ಮುಖ್ಯರಸ್ತೆಯಲ್ಲಿರುವ ಮನೆ, ಯಲಹಂಕದಲ್ಲಿರುವ ಫ್ಲ್ಯಾಟ್, ಬ್ಯಾಟರಾಯನಪುರದ ಪರಿಚಿತರ ಮನೆ, ಮೈಸೂರಿನ ಶ್ರೀರಾಂಪುರದಲ್ಲಿರುವ ಪರಿಚಿತರ ಮನೆ, ಉಡುಪಿಯ ಹೆಬ್ರಿ ರಸ್ತೆಯಲ್ಲಿರುವ ತೆಂಕ ಮಿಜಾರಿನಲ್ಲಿರುವ ಪರಿಚಿತರ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಕೆಎಎಸ್ ಅಧಿಕಾರಿ ಸುಧಾ ಅವರ ಮನೆಯಲ್ಲಿ ನಗದು ಅಪಾರ ಪ್ರಮಾಣದ ಚಿನ್ನಾಭರಣ, ಟೊಯೋಟಾ ಫಾರ್ಚೂನರ್ ಕಾರು ಪತ್ತೆಯಾಗಿವೆ ಎಂದು ಎಸಿಬಿ ಎಸ್ ಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ

ಸುಧಾ ಅವರ ಮನೆಯಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲಿಸುತ್ತಿರುವುದು.


ಡಾ.ಸುಧಾ ಅವರ ಬಳಿ ವಶಪಡಿಸಿಕೊಂಡಿರುವ ಚಿನ್ನಾಭರಣ ಐಷಾರಾಮಿ ವಸ್ತುಗಳು ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಡಾ.ಸುಧಾ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದರು. ಪ್ರಸ್ತುತ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಆಡಳಿತಾಧಿಕಾರಿ ಹುದ್ದೆಯಲ್ಲಿದ್ದು ಅವರ ಅಧಿಕಾರಿ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು. ಈ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಎಸಿಬಿಗೆ ಆದೇಶಿಸಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ. ಎಸಿಬಿ ಬೆಂಗಳೂರು ನಗರ ವಿಭಾಗ ಮತ್ತು ವಿವಿಧ ಜಿಲ್ಲೆಯ ತಂಡಗಳು ದಾಳಿ ನಡೆಸಿವೆ.
ಸುಧಾ ಅವರು ಹೊಂದಿರುವ ಆಸ್ತಿ ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರಿದಿದೆ.


ಅಬ್ರಾಹಾಂ ದೂರು:
ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಪತಿ ಹಾಗೂ ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದು ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು.

ಕೆಜಿ ಗಟ್ಟಲೆ ಚಿನ್ನ
ಕೆಎಎಸ್ ಅಧಿಕಾರಿ ಡಾ.ಸುಧಾ ಕೊಡಿಗೇಹಳ್ಳಿಯ ತಿಂಡ್ಲು ಮುಖ್ಯರಸ್ತೆಯ ಭವ್ಯ ಬಂಗಲೆಯಲ್ಲಿ ವಾಸವಾಗಿದ್ದು ಅವರ ಬಳಿ ಚಿನ್ನದ ಡಾಬು,ಕಾಸಿನ ಸರ,ಹಲವು ಸರಗಳು,ಉಂಗುರಗಳು,ಕಿವಿಯೋಲೆಗಳು
ಸೇರಿ ಕೆಜಿ ಗಟ್ಟಲೆ ಚಿನ್ನಾಭರಣವನ್ನು ಕಂಡು ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಂಗಾಗಿದ್ದಾರೆ.

ಸುಧಾ ಬಳಿಯಿರುವ ಬಂಗಾರದ ಆಭರಣಗಳು.


ಚಿನ್ನಾಭರಣಗಳ ಜೊತೆ ಫಾರ್ಚೂನರ್ ಕಾರು ೧೦ ಲಕ್ಷ ನಗದು ಜಪ್ತಿ ಮಾಡಲಾಗಿದ್ದು ಮುಂಜಾನೆ ೫ ಗಂಟೆಯಿಂದ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ನಡೆಸಲು ಬಂದ ಅಧಿಕಾರಿಗಳಿಗೆ ಸುಧಾ ಸುಮಾರು ಅರ್ಧ ಗಂಟೆಗಳ ಕಾಲ ಬಾಗಿಲು ತೆಗೆಯದೇ ಸತಾಯಿಸಿದರು ಎಂದು ಎಸಿಬಿ ಮೂಲಗಳು ತಿಳಿಸಿವೆ.