ಕೆಎಇ ಪರೀಕ್ಷೆ : ಕಲಬುರಗಿ ಪರೀಕ್ಷಾ ಕೇಂದ್ರ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಕಲಬುರಗಿಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಭರವಸೆ

ಕಲಬುರಗಿ:ಏ.05:ಕಲಬುರಗಿ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕಿ ಕೆ. ರಮ್ಯಾ ಅವರು ಭರವಸೆ ನೀಡಿದ್ದಾರೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ದ್ವಿತೀಯ ಪಿಯು ನಂತರ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರೀಲ್ 18 ಹಾಗೂ 19 ರಂದು ಪರೀಕ್ಷೆಗಳು ನಡೆಸಲಿದೆ. ಆದರೆ, ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡಾಗ ದೂರದ ಕಾರವಾರ, ಕೋಲಾರ ಹಾಗೂ ಧಾರವಾಡ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳು ನೀಡಿರುವುದು ಗೊತ್ತಾಗಿದೆ. ಕಲಬುರಗಿ ಜಿಲ್ಲೆಯ‌ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವಾಗಿ ಕಲಬುರಗಿ ಎಂದು ನಮೂದಿಸಿದ್ದರೂ ಕೂಡಾ ದೂರದ ಪರೀಕ್ಷಾ ಕೇಂದ್ರಗಳು ನಮೂದಾಗಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿತ್ತು. ಈ ವಿಷಯ ತಿಳಿದ ಸಚಿವರು ರಮ್ಯಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಭ್ಯರ್ಥಿಗಳು ದೂರದ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಆಗುವ ತೊಂದರೆಗಳನ್ನು ವಿವರಿಸಿ ಮನವರಿಕೆ ಮಾಡಿದರು. ಆಗ ಪ್ರತಿಕ್ರಿಯಿಸಿದ ರಮ್ಯಾ ಅವರು ಕಲಬುರಗಿ ಜಿಲ್ಲೆಯ ಅಭ್ಯರ್ಥಿಗಳನ್ನು ಕಲಬುರಗಿ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು ಎಂದು‌ ಸಚಿವರು ತಿಳಿಸಿದ್ದಾರೆ.