ಕೆಎಂಎಫ್ ನಂದಿನಿ ಉಳಿಸಿ ಎಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಏ.10:- ಕರ್ನಾಟಕ ರಾಜ್ಯದ ರೈತರ ಹೆಮ್ಮೆಯ ಬ್ರಾಂಡ್ ಆದ ಕೆಎಂಎಫ್ ನಂದಿನಿ ಉಳಿಸಿ ಎಂದು ಒತ್ತಾಯಿಸಿ ಇದರ ವಿರುದ್ಧ ನಡೆದಿರುವ ಪಿತೂರಿಯನ್ನು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರಿನ ಅಗ್ರಹಾರ ವೃತ್ತದಲ್ಲಿರುವ ನಂದಿನಿ ಹಾಲು ಮಾರಾಟ ಮಳಿಗೆ ಎದುರು ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕರ್ನಾಟಕ ನಂದಿನಿ ಹಾಲು ಮತ್ತು ಉತ್ಪನ್ನಗಳು ಕನ್ನಡಿಗರ ಅಸ್ಮಿತೆ. ಈ ನಂದಿನಿ ಹಾಲಿನ ಉತ್ಪನ್ನಗಳ ಮೇಲೆ ರಾಜ್ಯದಲ್ಲಿ ಲಕ್ಷಾಂತರ ರೈತರು, ಅವರ ಕುಟುಂಬಿಕರು ಅವಲಂಬಿತರಾಗಿದ್ದಾರೆ. ನಂದಿನಿಯನ್ನು ಗುಜರಾತಿನ ಅಮೂಲ್ ನೊಂದಿಗೆ ವಿಲೀನ ಮಾಡುವುದರಿಂದ ಲಕ್ಷಾಂತರ ಜನರು ಬೀದಿ ಪಾಲಾಗುತ್ತಾರೆ.
ಆದ್ದರಿಂದ ಯಾವುದೇ ಕಾರಣಕ್ಕೂ ಅಮೂಲ್ ನೊಂದಿಗೆ ವಿಲೀನ ಮಾಡಬಾರದು. ಒಂದು ವೇಳೆ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಕಛೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸೇನಾಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಎಳನೀರು ರಾಮಣ್ಣ, ಬಂಗಾರಪ್ಪ, ಸಿದ್ದರಾಜು, ಪ್ರದೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.