
ಕಲಬುರಗಿ,ಅ.31: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ್ ಪಾಟೀಲ್ ತೇಲ್ಕೂರ್ ಒತ್ತಾಯಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಇಂಥದ್ದೇ ಅಕ್ರಮ ನಡೆದಾಗ ಪ್ರಿಯಾಂಕ್ ಖರ್ಗೆ ಅಂದಿನ ಗೃಹ ಸಚಿವರನ್ನು ಅಸಮರ್ಥ ಎಂದು ಟೀಕಿಸಿದ್ದರು. ಮೇಲಾಗಿ ಪರೀಕ್ಷಾ ಅಕ್ರಮ ತಡೆಯುವಲ್ಲಿ ಸರಕಾರ ವಿಫಲಗೊಂಡಿದೆ ಎಂದಿದ್ದರು. ಈಗ ನಡೆದಿರುವ ಪರೀಕ್ಷಾ ಅಕ್ರಮಗಳನ್ನು ನೋಡಿದರೆ ಹಾಲಿ ಗೃಹ ಸಚಿವರು ಸಹ ಏಕೆ ಅಸಮರ್ಥರು ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.
ಪರೀಕ್ಷಾ ಅಕ್ರಮದ ಕುರಿತು ಜಿಲ್ಲಾ ಪೆÇಲೀಸರು ತನಿಖೆ ನಡೆಸಲು ಸಮರ್ಥರಲ್ಲ ಎಂದ ಅವರು, ಈಗಾಗಲೇ ಜೇವರ್ಗಿ, ಚಿತ್ತಾಪುರ ತಾಲೂಕಿನಲ್ಲಿ ನಡೆದ ಘಟನೆಗಳಲ್ಲಿ ಪೆÇಲೀಸರು ಹೇಗೆ ವರ್ತಿಸಿದ್ದಾರೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಪೆÇಲೀಸರು ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಾ ಎಲ್ಲವನ್ನೂ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈಚೆಗೆ ನಡೆದ ಪರೀಕ್ಷಾ ಅಕ್ರಮವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ತೇಲ್ಕೂರ್ ತಾಕೀತು ಮಾಡಿದರು.
ನಮಗೆ ಪೆÇಲೀಸರ ಸಾಮಥ್ರ್ಯದ ಕುರಿತು ಯಾವುದೇ ಅನುಮಾನವಿಲ್ಲ. ಆದರೆ ಅವರನ್ನು ರಾಜ್ಯ ಸರಕಾರ ತನ್ನ ಇಷ್ಟಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಹಾಗಾಗಿ, ತಮಗೆ ಸದ್ಯದ ಪರಿಸ್ಥಿತಿಯಲ್ಲಿ ಪೆÇಲೀಸ್ ಇಲಾಖೆಯ ಮೇಲೆ ನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಪರೀಕ್ಷಾ ಅಕ್ರಮ ನಡೆದಾಗ ಐಪಿಎಸ್ ಅಧಿಕಾರಿಯನ್ನು ಸಹ ಬಂಧಿಸಿ ತನಿಖೆಗೆ ಒಳಪಡಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿತ್ತು. ಆದರೆ ಈಗ ಪರೀಕ್ಷಾ ಅಕ್ರಮ ಇಷ್ಟೊಂದು ಬಹಿರಂಗವಾಗಿ ನಡೆಯುತ್ತಿರುವುದು ಪತ್ತೆಯಾಗಿದ್ದರೂ, ಪ್ರಕರಣದಲ್ಲಿ ಭಾಗಿಯಾಗಿರುವ ಒಬ್ಬ ಅಧಿಕಾರಿಯನ್ನೂ ಬಂಧಿಸಿಲ್ಲ. ಅಧಿಕಾರಿಗಳ ಕೈವಾಡವಿಲ್ಲದೆ ಇಂತಹ ಬೃಹತ್ ಸ್ವರೂಪದ ಪರೀಕ್ಷಾ ಅಕ್ರಮ ನಡೆಯುವುದು ಸಾಧ್ಯವಿಲ್ಲ. ಆದಾಗ್ಯೂ ಹಾಲಿ ರಾಜ್ಯ ಸರಕಾರ ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಮಾತೆತ್ತಿದರೆ ತಪ್ಪಿತಸ್ಥರು ಯಾರೇ ಇದ್ದರೂ ಒದ್ದು ಒಳಗೆ ಹಾಕಬೇಕೆಂದು ಹೇಳಿಕೆ ನೀಡುತ್ತಿದ್ದ ಪ್ರಿಯಾಂಕ್ ಖರ್ಗೆ ಈಗ ಏಕೆ ಸುಮ್ಮನಿದ್ದಾರೋ ಅರ್ಥವಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಪರೀಕ್ಷಾ ಅಕ್ರಮ ಬಯಲಾದ ಹಿನ್ನಲೆಯಲ್ಲಿ ಮರು ಪರೀಕ್ಷೆ ನಡೆಸಬೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಕಿಂಗ್ ಪಿನ್ ಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು. ಅಕ್ರಮದಲ್ಲಿ ಕೆಲವು ಸಚಿವರುಗಳು ಭಾಗಿಯಾಗಿರುವ ಅನುಮಾನವಿದೆ. ಮೇಲಾಗಿ, ಪರೀಕ್ಷಾ ಅಕ್ರಮಕ್ಕೆ ಸಹಕರಿಸಲು ಸರಕಾರದಲ್ಲಿರುವ ಕೆಲವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬುದರ ತನಿಖೆ ಆಗಬೇಕು. ಮೊದಲ ಹಂತದಲ್ಲಿ ಇದೆಲ್ಲವೂ ನಡೆಯಬೇಕು. ಆ ನಂತರವಷ್ಟೇ ಮರು ಪರೀಕ್ಷೆ ನಡೆಸುವುದರ ಕುರಿತು ಚರ್ಚಿಸುವುದು ಸೂಕ್ತ ಎಂದರು.
ಪರೀಕ್ಷಾ ಅಕ್ರಮದ ಕುರಿತು ರಾಜ್ಯ ಸರಕಾರ ಮೌನ ವಹಿಸಿರುವುದನ್ನು ನೋಡಿದರೆ ಅಕ್ರಮದಲ್ಲಿ ಸರಕಾರದ ಕೆಲವರು ಭಾಗಿಯಾಗಿರುವ ಅನುಮಾನ ಹುಟ್ಟಿಸಿದೆ. ಬಹುಶಃ ಆ ಕಾರಣಕ್ಕಾಗಿಯೇ ಸರಕಾರ ಅಕ್ರಮದ ಕುರಿತು ಮೌನ ವಹಿಸಿದೆ ಎಂದು ತೇಲ್ಕೂರ್ ಗಂಭೀರ ಆರೋಪ ಮಾಡಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಇದ್ದರು.
ವಿಜಯೇಂದ್ರ ನೇತೃತ್ವದಲ್ಲಿ ಬರ ಅಧ್ಯಯನ
ಕಲಬುರಗಿ, ಬೀದರ್ ಸೇರಿದಂತೆ ಈ ಭಾಗದಲ್ಲಿ ಆವರಿಸಿರುವ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸೋತಿದೆ. ಈ ಹಿನ್ನೆಲೆಯಲ್ಲಿ ವೇಳೆ ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಅಧ್ಯಯನ ನಡೆಸಲಾಗುವುದು ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ತಿಳಿಸಿದರು.ಬರ ಅಧ್ಯಯನಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಯ ಬಿಜೆಪಿ ಸಂಸದರು ಹಾಗೂ ಶಾಸಕರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಸಂಸದರಾದ ಡಾ.ಉಮೇಶ್ ಜಾಧವ್ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ತಂಡದಲ್ಲಿರುತ್ತಾರೆ. ಉಭಯ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಅಧ್ಯಯನ ಕೈಗೊಂಡ ಬಳಿಕ ನವೆಂಬರ್ 10-11ರೊಳಗೆ ರಾಜ್ಯ ಸರಕಾರದ ಮೂಲಕ ರಾಜ್ಯಪಾಲರಿಗೆ ಬರ ಅಧ್ಯಯನ ವರದಿ ಸಲ್ಲಿಸಲಾಗುವುದು. ಇದೇ ವರದಿಯನ್ನು ಕೇಂದ್ರ ಸರಕಾರಕ್ಕೂ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.