ಕೆಆರ್ ಮಾರುಕಟ್ಟೆಗೆ ಕಾಯಕಲ್ಪ

ಬೆಂಗಳೂರು, ಜ.೧೧-ಶತಮಾನ ಸಂಭ್ರಮ ಕ್ಕೆ ಸನಿಹದಲ್ಲಿರುವ ಬೆಂಗಳೂರು ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆಆರ್ ಮಾರುಕಟ್ಟೆ), ಅದರ ಸೌಂದರ್ಯದ ಗುಣಲಕ್ಷಣಗಳನ್ನು ಉಳಿಸಿಕೊಂಡೇ ಮುಂದಿನ ಒಂದು ವರ್ಷದೊಳಗೆ ಆಧುನಿಕ ಮಾಲ್ ಸ್ವರೂಪದ ಮಾರುಕಟ್ಟೆಯೂ ತಲೆಎತ್ತಲಿದೆ.
ಬೆಂಗಳೂರಿನ ಸ್ಮಾರ್ಟ್ ಸಿಟಿ ಉಪಕ್ರಮದಡಿಯಲ್ಲಿ ಈ ಸಾಂಪ್ರದಾಯಿಕ ಕಟ್ಟಡದ ವಿನ್ಯಾಸವನ್ನು ಪರಿಷ್ಕರಿಸುವ ಈ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಗೊಂಡಿದ್ದು, ತ್ವರಿತವಾಗಿಯೇ ಕೆಆರ್ ಮಾರುಕಟ್ಟೆಗೆ ಹೊಸ ರೂಪವೇ ದೊರಯಲಿದೆ.
ಬರೋಬ್ಬರಿ ೧೪ ಎಕರೆ ವಿಸ್ತೀರ್ಣದ ಕೆಆರ್ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಮಾಂಸ ಮಾರಾಟ ನಡೆಯುತ್ತದೆ.ಆದರೆ, ಸ್ಮಾರ್ಟ್ ಸಿಟಿ ಉಪಕ್ರಮದಡಿಯಲ್ಲಿ ಅತ್ಯಾಧುನಿಕ ವಿಧಾನದ ಮೂಲಕ ಹೆಚ್ಚು ಸಂಘಟಿತ ವ್ಯವಸ್ಥೆ ರೂಪಿಸಲು ಬಿಬಿಎಂಪಿ ಹೆಜ್ಜೆ ಹಾಕಿದೆ.
ಪ್ರಸ್ತುತ, ನೆಲ ಮಾಳಿಗೆಯ ಪಾರ್ಕಿಂಗ್ ಸೌಲಭ್ಯಕ್ಕಾಗಿನ ತಾಣ ಕಸವನ್ನು ಡಂಪ್ ಮಾಡುವ ತಾಣವಾಗಿ ಮಾರ್ಪಟ್ಟಿದೆ.ಅಲ್ಲದೆ ಈ ಸ್ಥಳದಲ್ಲಿನ ಒಳಮಾರ್ಗಗಳು ಜಾನುವಾರುಗಳ ಅಡ್ಡೆಯಾಗಿದೆ ಎನ್ನುವ ಆರೋಪಗಳು ದಿನೇ ದಿನೇ ಕೇಳಿಬರುತ್ತಿದೆ.
ಆದರೆ, ಹೊಸ ಉಪಕ್ರಮದ ಅಡಿಯಲ್ಲಿ, ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೆಯನ್ನು ತರಲಾಗುತ್ತದೆ. ಬೇರೆ ಬೇರೆ ಮಾಲ್ ಗಳಿಗೆ ಸಮಾನವಾಗಿ ಪಾರ್ಕಿಂಗ್ ಸ್ಥಳವನ್ನು ನವೀಕರಿಸಲಾಗುತ್ತದೆ.ಇದು ಪ್ರಸ್ತುತದಲ್ಲಿ ಸಕ್ರಿಯವಾಗಿರುವ ಕೆಆರ್ ಪಾರ್ಕಿಂಗ್ ಮಾಫಿಯಾವನ್ನು ತಡೆಯಲು ಸಹಕಾರಿಯಾಗಲಿದೆ.
ಚಿಕ್ಕಪೇಟೆ ಮೆಟ್ರೋ ನಿಲ್ದಾಣದಿಂದ ಮಾರುಕಟ್ಟೆಗೆ ಪಾದಚಾರಿ ಮಾರ್ಗವಿರಲಿದೆ. ಕೋಟ್ಯಾಂತರ ರೂಪಾಯಿ ವೆಚ್ಚದ ಈ ಯೋಜನೆಯು ಮಂತ್ರಿ ಮಾಲ್ ಸ್ವರೂಪದಲ್ಲಿ ತಯಾರಾಗಲಿದೆ.ಅಲ್ಲಿ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಮಾಲ್ ಗೆ ಪ್ರವೇಶ ಪಡೆಯಲು ಅವಕಾಶವಿದೆ.ಈ ಸ್ಥಳವು ಚಿಕ್ಪೆಪೇಟೆ ಮೆಟ್ರೋ ನಿಲ್ದಾಣದಿಂದ ನೇರ ಪ್ರವೇಶವನ್ನು ಪಡೆಯುತ್ತದೆ. ಇದು ಪಾರ್ಕಿಂಗ್ ಮತ್ತು ಬಸ್ ನಿಲ್ದಾಣದೊಂದಿಗೆ ಸಹ ಸಂಪರ್ಕಿಸುತ್ತದೆ.
ಆವರಣದ ಶುಚಿತ್ವ ವನ್ನು ಕಾಪಾಡಿಕೊಳ್ಳುವುದು ಮತ್ತು ಹೆಚ್ಚಿನ ಜನರನ್ನು ಒಳಗೊಳ್ಳುವಂತಾಗಲು ಈ ಯೋಜನೆ ತಯಾರಿಸಲಾಗುತ್ತಿದೆ. ಇನ್ನೂ,
ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಒಂದಾದ ಮಾಂಸದ ಮಾರಾಟ ಕೇಂದ್ರವನ್ನು ಇಲ್ಲಿ ಪುನರ್ನಿರ್ಮಾಣ ಮಾಡಲಾಗುತ್ತಿದೆ.
ಇಡೀ ಮಾಂಸ ಮಾರುಕಟ್ಟೆಯನ್ನು ನಾವು ಕೆಡವಿ ಪುನರ್ನಿರ್ಮಾಣ ಮಾಡಲಿದ್ದೇವೆ. ಮಾಂಸವನ್ನು ತಾಜಾವಾಗಿರಿಸಿಕೊಳ್ಳಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಿದ್ದೇವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಹೊಸ ಮಾರುಕಟ್ಟೆ ಏನೇನಿದೆ?
ಫುಡ್ ಪ್ಲಾಝಾ ಸ್ವಚ್ಛ ಶೌಚಾಲಯಗಳು
ಪೋಲಿಸ್ ಚೌಕಿ
ಪೋಸ್ಟಲ್ ಕಟ್ಟಡವನ್ನು ಮರುನಿರ್ಮಾಣ
ಮಾರುಕಟ್ಟೆಯ ಆವರಣದಲ್ಲಿ ಪಾದಾಚಾರಿ ಮಾರ್ಗ
ಆಧುನಿಕ ಪಾರ್ಕಿಂಗ್ ವ್ಯವಸ್ಥೆ
ಸ್ವಚ್ಛವಾದ ನಿರ್ಮಿತ ಅಂಗಡಿಗಳೊಂದಿಗೆ ಮೀಸಲಾದ ಸ್ಥಳ

ಐತಿಹಾಸಿಕ ಮಾರುಕಟ್ಟೆ..!
ಈ ಸ್ಥಳವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ, ೧೭೯೧ ರಲ್ಲಿ ಆಂಗ್ಲೋ-ಮೈಸೂರು ಯುದ್ಧದ ಸ್ಥಳ ಇದಾಗಿದೆ.ಹಾಗೆಯೇ ಈ ಜಾಗ ಕಾಲಾನಂತರದಲ್ಲಿ ಮಾರುಕಟ್ಟೆಯಾಗಿ ರೂಪುತಳೆದಿದೆ.೧೯೨೧ರಲ್ಲಿ ಮೈಸೂರಿನ ಒಡೆಯರ್ ಮಾರುಕಟ್ಟೆಯ ಮುಂಭಾಗದ ಪ್ರಸಿದ್ದ ರೆಡ್ ಫ್ರಂಟ್ ಸೈಡ್ ನಿರ್ಮಾಣ ಮಾಡಿದ್ದಾರೆ.

ಆಯುಕ್ತರ ಭೇಟಿ, ಪರಿಶೀಲನೆ..!
ಬಿಬಿಎಂಪಿ ವ್ಯಾಪ್ತಿಯ ಕೆ.ಆರ್.ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಬೆಂಗಳೂರು ಸ್ಮಾಟ್ ಸಿಟಿ ಲಿ. ಅಡಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿರುವ ಕುರಿತು ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಪ್ರಮುಖ ಭಾಗದಲ್ಲಿ ಇರುವ ಕೆಆರ್ ಮಾರುಕಟ್ಟೆಗೆ ಬಹಳಷ್ಟು ಜನರು ಬರುತ್ತಾರೆ.ಅವರಿಗೆ ಸಕಲಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪಾಲಿಕೆ ಕೆಲಸ ಮಾಡುತ್ತಿದೆ. ಒಂದು ವರ್ಷದೊಳಗೆ ಇಲ್ಲಿನ ನವೀಕರಣ ಕಾರ್ಯ ಮುಕ್ತಾಯ ಆಗಲಿದೆ ಎಂದು ತಿಳಿಸಿದರು.
ಈ ವೇಳೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ದಕ್ಷಿಣ ವಲಯ ವಿಶೇಷ ಆಯುಕ್ತ ಬಸವರಾಜು, ಪಶ್ಚಿಮ ವಲಯ ಜಂಟಿ ಆಯುಕ್ತ ಶಿವಸ್ವಾಮಿ, ಸ್ಮಾರ್ಟ್ ಸಿಟಿ ಮುಖ್ಯ ಅಭಿಯಂತರ ರಂಗನಾಥ ನಾಯ್ಕ್, ಉಪ ಆಯುಕ್ತ(ಮಾರುಕಟ್ಟೆ) ಹೇಮಂತ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.