ಕೆಆರ್ ಕ್ಷೇತ್ರದಲ್ಲಿ ಒಂದು ಲಕ್ಷ ಲೀಡ್: ಟಿ.ಎಸ್ ಶ್ರೀವತ್ಸ

ಸಂಜೆವಾಣಿ ನ್ಯೂಸ್
ಮೈಸೂರು: ಏ.08:- ಪ್ರಧಾನಿ ನರೇಂದ್ರ ಮೋದಿ ಸಮರ್ಥರು ಎಂಬುದು ದೇಶದ ಜನತೆಗೆ ಮನವರಿಕೆಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು
ನಗರದ ವಿದ್ಯಾರಣ್ಯಪುರಂ ಸುತ್ತಮುತ್ತ ಮೈಸೂರು ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಯದುವೀರ್ ಒಡೆಯರ್ ಅವರ ಪರ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ನೀಡಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರದ ಜತೆಗೆ ಮತಯಾಚಿಸಿ ಮಾತನಾಡಿದರು. ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ವಿಶ್ವಮಟ್ಟದಲ್ಲಿ ಭಾರತವನ್ನು ವಿಶ್ವಗುರುನಾಗಿಸುವ ದೆಸೆಯಲ್ಲಿ ಪ್ರಧಾನಿ ಮೋದಿಯವರು ಕೈಗೊಂಡಿರುವ ರಾಜ ತಾಂತ್ರಿಕ ವಿಷಯಗಳಿಂದ ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಸ್ಥಾನ ಪಡೆದಿದೆ. ಮೋದಿಯವರ ಜನಪರ ಹಾಗೂ ಪಾರದರ್ಶಕ ಆಡಳಿತದ ಜತೆಗೆ ದೇಶದ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ, ಕೋಟ್ಯಂತರ ಜನರ ಆಶಯವಾಗಿದ್ದ ರಾಮ ಮಂದಿರ ನಿರ್ಮಾಣ ಸೇರಿ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಕ್ಷೇತ್ರದಲ್ಲಿ ಬಿಜೆಪಿಗೆ ಒಂದು ಲಕ್ಷ ಲೀಡ್ ಕೊಡುವ ಮೂಲಕ ಮೋದಿಯವರ ಕೈ ಬಲ ಪಡಿಸಲು ಶ್ರಮವಹಿಸಬೇಕಿದೆ ಎಂದರು.
ಬಿಜೆಪಿ ಎಸಿ ಮೋರ್ಚಾ ಅಧ್ಯಕ್ಷ ವಿ. ಶೈಲೇಂದ್ರ, ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರಪಾಲಿಕೆ ಸದಸ್ಯ ಪಾರ್ಥಸಾರಥಿ, ರಮೇಶ್, ಜಗದೀಶ್, ಕೆ ಆರ್ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜ್ ಅರಸ್, ಜೆ.ರವಿ, ಪ್ರಧಾನ ಕಾರ್ಯದರ್ಶಿ ಜಯರಾಮ್, ಜಗದೀಶ್, ಸಂದೀಪ್, ಧರ್ಮೇಂದ್ರ, ಶಿವಲಿಂಗ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.