ಕೆಆರ್ ಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದ್ಯ ನಿಷೇಧ; ರವಿಕೃಷ್ಣಾರೆಡ್ಡಿ

ದಾವಣಗೆರೆ.ಮಾ.೧: ಕರ್ನಾಟಕದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದ ಸ್ಥಾಪನೆಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯದ ಸಮಗ್ರ ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸಿದ್ದು, ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ‌ರೆಡ್ಡಿ ಹೇಳಿದರು.ದಾವಣಗೆರೆಯ ಜಯದೇವ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಆರ್‌ಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರದಲ್ಲಿ ಖಾಲಿ ಇರುವ ಮೂರು ಲಕ್ಷಕ್ಕೂ ಅಧಿಕ ನೌಕರಿಗಳನ್ನು ಭರ್ತಿ ಮಾಡಲಾಗುವುದು. ಭ್ರಷ್ಟಾಚಾರ ರಹಿತ ಪಾರದರ್ಶಕ ಮತ್ತು ಜವಾಬ್ದಾರಿ ಆಡಳಿತ ನಡೆಸಲಾಗುವುದು. ಅಲ್ಲದೆ ಭ್ರಷ್ಟ್ರಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಘಟಕವನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲಾಗುವುದು. ಅಲ್ಲದೆ ಹತ್ತನೇ ತರಗತಿವರೆಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು ಹಾಗು ತಾಲೂಕಿಗೊಂದು ಸರ್ಕಾರಿ ಮೆಡಿಕಲ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ತೆರೆಯಲಾಗುವುದು ಎಂದರು.ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮತ್ತು ಬೆಲೆ ಪದ್ಧತಿ ಜಾರಿ, ಗ್ರಾಮೀಣ ಭಾಗದಲ್ಲಿಯೇ ಮೌಲ್ಯವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು. ಸಾಲ ಮುಕ್ತ ರೈತ, ಬಡತನ ಮುಕ್ತ ಹಳ್ಳಿಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು.‌ ರಾಜ್ಯದ ಪ್ರತಿ ಹಳ್ಳಿಗೂ ನದಿ ಮೂಲದ ಕುಡಿಯುವ ನೀರಿನ ವ್ಯವಸ್ಥೆ, ರಾಜ್ಯದ ಪ್ರತಿಕೆರೆಯಲ್ಲೂ ಸೌರ ವಿದ್ಯುತ್ ಘಟಕ ಮತ್ತು ಸ್ಥಳೀಯವಾಗಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕತೆ ನಿರ್ಮಾಣ, ಉದ್ಯೋಗ ಸೃಷ್ಟಿ, ಗ್ರಾಮ ಸ್ವರಾಜ್ಯ ಮಾಡಲು ಕ್ರಮ ಕೈಗೊಳ್ಳಲಾಗುವುದು.ಇದಲ್ಲದೆ ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡದಲ್ಲಿ ಪ್ರಾಥಮಿಕವಾಗಿ ಆದ್ಯತೆ ನೀಡಲಾಗುವುದು. ಜತೆಗೆ ಎಲ್ಲಾ ಮಾಸಾಶನಗಳನ್ನು ಕನಿಷ್ಠ 2ಸಾವಿರಕ್ಕೆ ಏರಿಕೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.ಜಾಥಾದಲ್ಲಿ ಕೆ ಆರ್ ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ, ದಾವಣಗೆರೆ ಜಿಲ್ಲಾ ಘಟಕದ ಅಭಿಷೇಕ್, ಮಲ್ಲಪ್ಪ, ಮಹಾಂತೇಶ್, ನಿಂಗನಗೌಡ, ಟಿ.ಅಜ್ಜೇಶ್, ಸೋಮಶೇಖರ್, ಶಿವಣ್ಣ ಸೇರಿದಂತೆ ಇತರರು ಇದ್ದರು. ಚನ್ನಗಿರಿಯಿಂದ  ಆಗಮಿಸಿದ ಜಾಥಾವು ದಾವಣಗೆರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ, ನಂತರ ಹರಿಹರಕ್ಕೆ ಸಾಗಿತು‌.